ಸೆಪ್ಟೆಂಬರ್ 4, 2020

ಹುಲಿಯ ಹೆಜ್ಜೆಯ ಜಾಡು ಹಿಡಿದು…

ಸ್ನೇಹಿತರಿಗೆ ಹಂಚಿಕೊಳ್ಳಿ

ಹುಲಿಗಳ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ. ಕಾಡಿನ ಮಧ್ಯೆ ಇರುವ ನನ್ನ ಅಜ್ಜಿ ಮನೆಯ ದಾರಿಯಲ್ಲಿ ಅಪರೂಪಕ್ಕೊಮ್ಮೆ ವ್ಯಾಘ್ರ ರಸ್ತೆ ದಾಟಿ ಹೋಗಿದ್ದನ್ನು ನೋಡಿದ ನೆನಪು. ಈ ಹುಲಿಗಳ ಬಗ್ಗೆ ಓದಿ ತಿಳಿದ ವಿಷಯಗಳನ್ನು ನಿಮಗೆ ತಿಳಿಸುವದು ಈ ಲೇಖನದ ಉದ್ದೇಶ.

ಹುಲಿಗಳು 2 ಮಿಲಿಯನ್ ವರ್ಷಗಳಿಗೂ ಹಳೆಯದಾದ ಪ್ರಾಣಿಗಳು. ಕಾಡಿನಲ್ಲಿ ಯಾವ ಪ್ರಾಣಿಗೂ ಹೆದರದ ಈ ಹುಲಿಗಳು ಇಂದು ಅಪಾಯಕರ ಸ್ಥಿತಿಯಲ್ಲಿವೆ. ಹೀಗೇ ಕಾಡಿನ ನಾಶ ಹಾಗೂ ಹುಲಿಗಳ ಬೇಟೆ ಮುಂದುವರಿದಲ್ಲಿ ಏಷ್ಯಾದ ಕಾಡಿನಲ್ಲಿರುವ ಎಲ್ಲಾ ಹುಲಿಗಳು ಕಣ್ಮರೆಯಾಗಲಿವೆ. ಬರೀ ಮೃಗಾಲಯದಲ್ಲಿ ಮಾತ್ರ ಕಾಣ ಸಿಗಲಿವೆ.

ಇತಿಹಾಸ ಮತ್ತು ಪುರಾಣಗಳಲ್ಲಿ ಹುಲಿ

ಗುರು ಸುದತ್ತ ಮುನಿ ತನ್ನ ಶಿಷ್ಯರೊಂದಿಗೆ ಇದ್ದಾಗ ಹುಲಿಯೊಂದು ಆಕ್ರಮಣ ಮಾಡಿತು. ಆಗ ಮುನಿಯು ತನ್ನ ಶಿಷ್ಯನಾದ ಸಳನಿಗೆ “ಹೋಯ್ ಸಳ” ಎಂದು ಕೂಗಿ ಹುಲಿಯನ್ನು ಹೊಡೆಯಲು ಆದೇಶಿಸಿದರು. ಹೋಯ್ ಎಂದರೆ ಹಳಗನ್ನಡದಲ್ಲಿ ಹೊಡೆ ಎಂದರ್ಥ. ಸಳ ಹುಲಿಯೊಡನೆ ಹೊಡೆದಾಡಿ ಉರುಳಿಸಿದನು. ನಂತರ ಸಳನ ವಂಶವು ಹೊಯ್ಸಳ ಎಂದು ಪ್ರಖ್ಯಾತಿ ಪಡೆಯಿತು. ಪುರಾಣಗಳಲ್ಲಿ ಹುಲಿ ದುರ್ಗೆಯ ವಾಹನ. ಶಿವನನ್ನು ಸಹ ಹುಲಿಯ ಚರ್ಮದ ಮೇಲೆ ಕುಳಿತಿರುವಂತೆ, ಹುಲಿಯ ಚರ್ಮ ಉಟ್ಟಿರುವಂತೆ ಹೇಳಲಾಗಿದೆ.

ಹುಲಿಯ ಬಗೆಗಳು

ಈ ಹುಲಿಗಳನ್ನು ವಿಜ್ಞಾನಿಗಳು 8 ಬಗೆಗಳೆಂದು ವಿಂಗಡಿಸಿದ್ದು ಅವುಗಳಲ್ಲಿ 3 ವಿಧದ ಹುಲಿಗಳು ಈಗಾಗಲೇ ಭೂಮಿಯಿಂದ ಕಣ್ಮರೆಯಾಗಿವೆ. ಭಾರತೀಯ ಅಥವಾ ಬಂಗಾಳದ ಹುಲಿಗಳು, ಇಂಡೋ ಚೈನೀಸ್ ಹುಲಿಗಳು, ಸುಮಾತ್ರದ ಹುಲಿಗಳು, ಸೈಬೇರಿಯಾದ ಹುಲಿಗಳು, ದಕ್ಷಿಣ ಚೀನಾದ ಹುಲಿಗಳು, ಜಾವಾ ಹುಲಿಗಳು (1980ರ ದಶಕದಲ್ಲಿ ನಾಶವಾಗಿದೆ), ಬಾಲಿ ಹುಲಿಗಳು (1940ರ ದಶಕದಲ್ಲಿ ನಾಶವಾಗಿದೆ.) ಮತ್ತು ಕಾಸ್ಪಿಯನ್ ಹುಲಿಗಳು (1970ರ ದಶಕದಲ್ಲಿ ನಾಶವಾಗಿದೆ)

ಹುಲಿಯ ಗಾತ್ರ ಮತ್ತು ಗುಣಲಕ್ಷಣ

ಹುಲಿ ಉದ್ದನೆಯ ದೇಹ, ಕಿರಿದಾದ ಕುತ್ತಿಗೆ ಹೊಂದಿರುತ್ತದೆ. ಕಿತ್ತಳೆ ಅಥವಾ ಹಳದಿ ಬಣ್ಣ ಹೊಂದಿರುವ ಹುಲಿ ಅದರ ಮೇಲೆ ಕಪ್ಪು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ. ಹೆಚ್ಚಿನ ಹುಲಿಗೆ ನೂರಕ್ಕಿಂತ ಹೆಚ್ಚು ಪಟ್ಟೆಗಳಿದ್ದು ಎಲ್ಲ ಹುಲಿಗಳು ವಿಭಿನ್ನವಾದ ಪಟ್ಟೆ ಹೊಂದಿರುತ್ತದೆ. ಹುಲಿಯ ಪಟ್ಟೆ ರೀತಿಯ ಆಧಾರದ ಮೇಲೆ ಕಾಡಿನಲ್ಲಿರುವ ಹುಲಿಗಳನ್ನು ಗುರುತಿಸಲಾಗುತ್ತದೆ. ಹುಲಿ ಗರ್ಜನೆ 1 ಮೈಲಿಗಿಂತ ಹೆಚ್ಚು ದೂರದವರೆಗೆ ಕೇಳಿಸುತ್ತದೆ. ಕಾಡಿನಲ್ಲಿರುವ ಹುಲಿ ಸುಮಾರು 10 – 15 ವರ್ಷಗಳ ಕಾಲ ಬದುಕುತ್ತದೆ. ಅದೇ ಹುಲಿ ಮೃಗಾಲಯದಲ್ಲಿ 16-20 ವರ್ಷಗಳ ವರೆಗೆ ಬದುಕುತ್ತವೆ. ಸೈಬೇರಿಯದ ಹುಲಿಗಳು ಗಾತ್ರದಲ್ಲಿ ಅತಿ ದೊಡ್ಡವು ಸುಮಾತ್ರದ ಹುಲಿಗಳು ಅತಿ ಚಿಕ್ಕವು. ಹುಲಿಯ ದೃಷ್ಟಿ ರಾತ್ರಿಯ ವೇಳೆ ಮನುಷ್ಯನಿಗಿಂತ 6 ಪಟ್ಟು ಚೆನ್ನಾಗಿರುತ್ತದೆ. ಹುಲಿಗಳು ಬೆಕ್ಕುಗಳ ಜಾತಿಯಲ್ಲೇ ದೊಡ್ಡವು. ಹುಲಿ ಮರಿಗಳು ಹುಟ್ಟಿದಾಗ ಕುರುಡಾಗಿರುತ್ತವೆ. ಹುಲಿಯ ಉಗುರು ಬೆಕ್ಕಿನಂತೆ ಹಿಂದಕ್ಕೆ ಎಳೆದುಕೊಳ್ಳುವಂತಿರುತ್ತದೆ. ಹುಲಿಯ ಮುಂಗಾಲಲ್ಲಿ 5 ಬೆರಳುಗಳಿದ್ದರೆ ಹಿಂಗಾಲಲ್ಲಿ 4 ಬೆರಳುಗಳಿರುತ್ತದೆ.

ಹುಲಿ ಇರುವ ಜಾಗ

ಹುಲಿಗಳು ಸಾಮಾನ್ಯವಾಗಿ ದಟ್ಟವಾದ ಕಾಡಲ್ಲಿ ಅಡಗಿಕೊಳ್ಳಲು ಎತ್ತರವಾದ ಹುಲ್ಲುಗಳು ಇರುವಲ್ಲಿ ಹಾಗು ಬೇಟೆಯಾಡಲು ಪ್ರಾಣಿಗಳು ಇರುವಲ್ಲಿ ಇರುತ್ತದೆ. ಹುಲಿ ಹೆಚ್ಚು ಏಷ್ಯಾದಲ್ಲಿ ಕಂಡು ಬಂದಿವೆ. ಆಫ್ರಿಕಾದಲ್ಲಿ ಕಂಡು ಬಂದಿಲ್ಲ. ಹುಲಿ ತನ್ನ ಜಾಗದ ಸುತ್ತ ಮರ, ಗಿಡಗಳ ಮೇಲೆ ಮೂತ್ರವನ್ನು ಬಿಟ್ಟು ಹಾಗೂ ಮರಗಳ ಮೇಲೆ ಉಗುರಿನ ಗುರುತು ಮಾಡುವದರ ಮೂಲಕ ಉಳಿದ ಹುಲಿಗಳಿಗೆ ತಿಳಿಸುತ್ತವೆ.

ಹುಲಿಯ ಆಹಾರ ಮತ್ತು ಬೇಟೆ

ಹುಲಿಯನ್ನು ಬೇಟೆ ಆಡುವ ಪ್ರಾಣಿ ಎಂದರೆ ಅದು ಒಂದೇ. ಅದು ಮನುಷ್ಯ ಪ್ರಾಣಿ! ಹುಲಿ ಜಿಂಕೆ, ಕಾಡು ಕೋಣ, ಹಂದಿ ಇತ್ಯಾದಿಗಳನ್ನು ಬೇಟೆಯಾಡುತ್ತದೆ. ಹುಲಿಯ ಬೇಟೆಗಳಲ್ಲಿ ಹೆಚ್ಚಿನವು ವಿಫಲವಾಗುತ್ತದೆ. ಹುಲಿಮರಿಗಳು ಮೊದಲ 6-8 ವಾರಗಳ ಕಾಲ ಬರೀ ತಾಯಿ ಹಾಲು ಕುಡಿದು ಬದುಕುತ್ತವೆ.ನಂತರ ಹೆಣ್ಣು ಹುಲಿ ತನ್ನ ಮರಿಗಳನ್ನು ಬೇಟೆಯಾಡಿದ ಪ್ರಾಣಿಗಳನ್ನು ತಿನ್ನಲು ಒಯ್ಯುತ್ತದೆ. ಹೀಗೆ ತಾಯಿಯ ಜೊತೆ 2 ರಿಂದ 3 ವರ್ಷಗಳ ಕಾಲ ಇದ್ದು ನಂತರ ತಮ್ಮದೇ ಜಾಗ ಹುಡುಕಿಕೊಂಡು ಹೋಗುತ್ತವೆ.

ಹುಲಿಯ ಜೀವನ ಶೈಲಿ

ಹುಲಿಗಳು ಒಬ್ಬಂಟಿ ಪ್ರಾಣಿಗಳು. ಹೆಣ್ಣು ಹುಲಿ ಮಾತ್ರ ಹುಲಿ ಮರಿಗಳ ಜೊತೆ ಇರುತ್ತದೆ. ಮುಂಜಾನೆ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಅವು ಚುರುಕಾಗಿರುತ್ತವೆ. ಹುಲಿಗಳು ಉತ್ತಮವಾಗಿ ಈಜುತ್ತವೆ. ನಮ್ಮೂರುಗಳಲ್ಲಿ ಎಮ್ಮೆಗಳು ಮಾಡಿಕೊಳ್ಳುವಂತೆ ಹುಲಿಯೂ ಕೂಡ ಸೆಕೆಗಾಲದಲ್ಲಿ ನೀರಲ್ಲಿ ಕಾಲ ಕಳೆದು ಮೈ ತಂಪುಮಾಡಿಕೊಳ್ಳುತ್ತವೆ!

ಹುಲಿ ಮತ್ತು ನರಭಕ್ಷಣೆ

ಸಾಮಾನ್ಯವಾಗಿ ಮನುಷ್ಯನನ್ನು ಹುಲಿಗಳು ತಮ್ಮ ಆಹಾರಕ್ಕೆ ಬೇಟೆಯಾಡುವದಿಲ್ಲ. ಹುಲಿ ಸಾಮಾನ್ಯವಾಗಿ ಗಾಯಗೊಂಡು ಜಿಂಕೆ ಮುಂತಾದ ಪ್ರಾಣಿಗಳನ್ನು ಬೆನ್ನಟ್ಟಿ ಹಿಡಿಯುವ ಸಾಮರ್ಥ್ಯ ಕಳೆದುಕೊಂಡಾಗ ನರಭಕ್ಷಕ ಆಗಿ ಪರಿವರ್ತನೆಗೊಳ್ಳುತ್ತವೆ. ಬೇಟೆಗಾರರ ಗುಂಡೇಟಿನಿಂದ ಗಾಯಗೊಂಡ ಹುಲಿ ಸಹ ನರಭಕ್ಷಕ ಆಗಿ ಪರಿವರ್ತನೆಗೊಳ್ಳುತ್ತದೆ. ಒಮ್ಮೆ ಮನುಷ್ಯನ ಭಯ ಹುಲಿಗೆ ಹೋಯಿತೆಂದರೆ ಅದು ಅತ್ಯಂತ ಭಯಾನಕ ಪ್ರಾಣಿಯೇ ಸರಿ. ಚಂಪಾವತ್ ಎಂಬ ಹುಲಿ ಇತಿಹಾಸದಲ್ಲೇ ಹೆಚ್ಚು ನರಬಲಿ ತೆಗೆದುಕೊಂಡಿದೆ ಎಂದು ನಂಬಲಾಗಿದೆ. ಜಿಮ್ ಕಾರ್ಬೆಟ್ ಎಂಬಾತನಿಂದ ಕೊಲ್ಲಲ್ಪಡುವ ಮೊದಲು ಈ ಹುಲಿ 430 ಕ್ಕೂ ಹೆಚ್ಚು ಮಂದಿ ಬಲಿ ತೆಗೆದುಕೊಂಡಿತ್ತು. ಈಗ ಇಂತಹ ನರಭಕ್ಷಕ ಹುಲಿಗಳನ್ನು ಹಿಡಿದು ಮೃಗಾಲಯದಲ್ಲಿ ಇಡಲಾಗುತ್ತಿದೆ.

ಹುಲಿಗೆ ಬಂದ ಅಪಾಯ

ಹುಲಿಗಳು ಮನುಷ್ಯನ ಕೈಲಿ ನರಳುತ್ತಿವೆ. ಅದು ವಿನಾಶದ ಹಂತದಲ್ಲಿವೆ. ಮನುಷ್ಯನಿಂದ ಬೇಟೆಗೆ ಒಳಗಾಗುತ್ತಿವೆ. ಅವುಗಳು ಇರುವ ಕಾಡು ಅತಿಕ್ರಮಣ ಇತ್ಯಾದಿಗಳಿಂದ ನಾಶವಾಗುತ್ತಿದೆ. ಚೀನಾದ ಸಾಂಪ್ರದಾಯಿಕ ಔಷದ ತಯಾರಕಾರರು ಹೆಚ್ಚಾಗಿ ಹುಲಿಯ ದೇಹದ ಭಾಗಗಳನ್ನು ಬಳಸುತ್ತಾರೆ. ಹುಲಿಯ ಚರ್ಮ, ಮೂಳೆ ಇತ್ಯಾದಿಗಳು ಚೀನಾಕ್ಕೆ ಕಳ್ಳಸಾಗಣೆ ಆಗುತ್ತಿದೆ. 1900 ರ ಸುಮಾರಿಗೆ ಸುಮಾರು ಲಕ್ಷದಷ್ಟಿದ್ದ ಹುಲಿಗಳು ಇಂದು ಕೆಲವೇ ಸಾವಿರಗಳಷ್ಟಿವೆ. ಕೆಲವೇ ಸಮೀಕ್ಷೆಗಳ ಪ್ರಕಾರ 3600 ರಿಂದ 4600 ಹುಲಿಗಳಿವೆ. ಮಾಹಿತಿ ಕೃಪೆಃ ಹುಲಿಯ ಬಗ್ಗೆ ಇರುವ ಅಂತರ್ಜಾಲ ತಾಣಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.