ಸೆಪ್ಟೆಂಬರ್ 4, 2020

ದುಬಾರೆ ಕಾಡಿನಲ್ಲಿ ಆನೆಗಳ ಜೊತೆ..

ಸ್ನೇಹಿತರಿಗೆ ಹಂಚಿಕೊಳ್ಳಿ

ದುಬಾರೆ ಕಾಡು ಕೊಡಗಿನ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಕ್ಯಾಂಪ್ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ಹೀಗೆ ಹಿಡಿದ ಆನೆಗಳಿಗೆ ಕಾವೇರಿ ನದಿಯಲ್ಲೇ ಸ್ನಾನ. ಈ ಆನೆಗಳ ಸ್ನಾನ ನೋಡಲು ಬೆಳಿಗ್ಗೆ 8ರ ಸುಮಾರಿಗೆ ನೀವು ಅಲ್ಲಿರಬೇಕು. ಮೈಸೂರು ಮಹಾರಾಜರ ಕಾಲದಲ್ಲಿ ಮೈಸೂರು ದಸರಾಕ್ಕೆ ಆನೆಗಳನ್ನು ಇಲ್ಲೇ ಪಳಗಿಸುತ್ತಿದ್ದರಂತೆ. ದುಬಾರೆ ಕಾಡಿನಲ್ಲಿ “ದುಬಾರೆ ಇನ್” ಎಂಬ ರಿಸಾರ್ಟ್ ಇದೆ. ಅಲ್ಲಿಯೂ ಸಹ ರಾತ್ರಿಯೇ ಬಂದು ತಂಗಬಹುದು. ನಾವಿದ್ದ ಹೋಂ ಸ್ಟೇ ದುಬಾರೆ ಕಾಡಿನ ಸಮೀಪವೇ ಇತ್ತು. ಆದರೆ ಬೆಳಿಗ್ಗೆ ತಡವಾಗಿ ಬೆಳಿಗ್ಗೆ 8:45 ರ ಸುಮಾರಿಗೆ ದುಬಾರೆ ತಲುಪಿದೆವು. ನಮ್ಮ ಪುಣ್ಯಕ್ಕೆ ಆ ದಿನವೇ ಹೊಸ ಆನೆಯೊಂದನ್ನು ಹಿಡಿದಿದ್ದುದರಿಂದ ಆನೆಯ ಸ್ನಾನ ಇನ್ನೂ ಮುಗಿದಿರಲಿಲ್ಲ. ಬೇಸಿಗೆ ಸಮಯವಾದದ್ದರಿಂದ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿತ್ತು. ಅಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಬೋಟನ್ನು ಹತ್ತಿ ಕಾವೇರಿ ನದಿ ದಾಟಿ ದುಬಾರೆ ಕ್ಯಾಂಪನ್ನು ತಲುಪಿದೆವು.

ನಂತರ ಆನೆಯ ಕ್ಯಾಂಪ್ ನೋಡಲು ಟಿಕೆಟ್ ತೆಗೆದುಕೊಂಡು ಹೋದೆವು. ನಾವು ಹೋದದಿನ ವಾರದ ಕೊನೆ ಆದುದರಿಂದ ಜನ ಸಂದಣಿ ಜಾಸ್ತಿ ಇತ್ತು. ದೊಡ್ದ ದೊಡ್ಡ ಮರದ ದಿಮ್ಮಿ ಬಳಸಿ ಆನೆಯನ್ನು ಬಂಧಿಸಲು ಬೃಹತ್ ಬೋನನ್ನು ಕಟ್ಟಲಾಗಿತ್ತು. ಮಾನವ ಬುದ್ಧಿವಂತ ಈ ತರಹದ ಪಂಜರ ಕಟ್ಟಲು ಇನ್ನೊಂದು ಪಳಗಿಸಿದ ಆನೆ ಬಳಸುತ್ತಾನೆ! ಆನೆಯ ಸಹಾಯದಿಂದಲೇ ಮದವೇರಿದ ಆನೆ ಹಿಡಿದು ಪಳಗಿಸುತ್ತಾನೆ. ಒಬ್ಬ ಆನೆಯನ್ನು ಹಿಡಿದ ಬೋನಿನ ಕಸ ಗುಡಿಸುತ್ತಿದ್ದ. ಆತನ ಬಳಿಗೆ ಹೋಗಿ ಈ ಕ್ಯಾಂಪಿನ ಬಗ್ಗೆ ವಿವರಿಸುವಂತೆ ಕೇಳಿಕೊಂಡೆ. ಆತನ ಹೆಸರು ಗೋಬಿ ಅಂತಾ. ಮೂಲತ: ಇವರು ಜೇನು ಕುರುಬರು. ತಲ ತಲಾಂತರದಿಂದ ಈ ಕೆಲ್ಸ ಮಾಡಿಕೊಂಡು ಬಂದಿದ್ದಾರೆ. ಆನೆಯನ್ನು ಪಳಗಿಸುವದು ಇವರಿಗೆ ಕರತಲಾಮಲಕ. ಸರಕಾರದಿಂದ ಉತ್ತಮ ಸಂಬಳ ಸಿಗದ ಕೊರಗನ್ನೂ ಹೇಳಿಕೊಂಡ. ಹಳ್ಳಿಯ ಮೇಲೆ ದಾಂದಲೆ ಮಾಡುವ ಆನೆಗಳನ್ನು ಹಿಡಿಯುವದು ಅವರ ಕೆಲಸ. ಹೀಗೆ ಹಿಡಿದ ಆನೆಗಳನ್ನು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ.

ಅಷ್ಟರಲ್ಲಿ ದೊಡ್ಡ ಆನೆಯೊಂದನ್ನು ಸ್ನಾನಕ್ಕೆ ಒಯ್ಯುತ್ತಿದ್ದರು. ಅದರ ಸ್ನಾನ ನೋಡಲು ನಾವು ಹೊರಟೆವು. ಕಾವೇರಿ ನದಿಯಲ್ಲಿಳಿದ ಆನೆಯ ಮೈ ಮಾವುತ ಉಜ್ಜುತ್ತಿದ್ದರೆ ನೋಡಲು ಬಂದ ಜನ ನೀರಲ್ಲಿಳಿದು ಆನೆಯ ಮೈಗೆ ನೀರು ಚೆಲ್ಲಿದರು. ಆನೆ ತನ್ನ ಮೈಗೆ ತಾನೇ ನೀರು ಸಿಂಪಡಿಸಿಕೊಳ್ಳುವ ದೃಶ್ಯ ಅಮೋಘ! ಅದನ್ನು ಕಣ್ಣಾರೆ ನೋಡಿಯೇ ಸವಿಯ ಬೇಕು.

ನಂತರ ಎರಡು ಮರಿಯಾನೆಗಳು ಸ್ನಾನಕ್ಕೆ ಬಂದವು. ಅವೂ ಕೂಡ ಈ ಕಾವೇರಿ ನದಿ ತೀರದಲ್ಲಿ ಬಿದ್ದು ಹೊರಳಾಡಿವು. ಮಾವುತರಿಬ್ಬರು ಅದರ ಮೈ ಉಜ್ಜಿದರು. ಸುತ್ತ ನೆರೆದ ಜನರಿಗೂ ನೀರನ್ನು ಸಿಂಪಡಿಸಿ ಹೋದವು. ಸ್ನಾನ ಮಾಡಿ ಶುಭ್ರವಾದ ಆನೆಗಳಿಗೆ ಈಗ ಊಟದ ಸಮಯ. ಅವು ಬೋಜನ ಶಾಲೆಯ ಕಡೆಗೆ ಹೊರಟವು. ಅಲ್ಲಿ ಬೃಹತ್ ಪಾತ್ರೆಯಲ್ಲಿ ರಾಗಿ ಮುದ್ದೆಗಳನ್ನು ತಯಾರಿಸುತ್ತಿದ್ದರು. ಒಂದೊಂದು ರಾಗಿ ಮುದ್ದೆಯೂ ಎರಡು ಕೈಯಲ್ಲಿ ಹಿಡಿಯುವಷ್ಟು ದೊಡ್ಡ ಗಾತ್ರದವು. ತಿನ್ನುವದು ಆನೆಗಳು ತಾನೇ. ಆನೆಗಳಿಗೆ ರಾಗಿ ಮುದ್ದೆಯ ಸೇವೆಯೂ ಆಯ್ತು. ಆನೆ ಮರಿಯ ಸೊಂಡಿಲು ಮುಟ್ಟಿ ತಲೆಯ ನೇವರಿಸಿ ಪ್ರಕೃತಿಯ ಈ ವಿಸ್ಮಯ ಸೃಷ್ಟಿಗೆ ತಲೆದೂಗಿದೆವು. ಇನ್ನೇನು ಮತ್ತೆ ಕಾವೇರಿ ದಾಟಿ ಆಚೆ ತೀರಕ್ಕೆ ವಾಪಸ್ ಹೋಗಬೇಕು. ಹೋಗುವಾಗ ನಡೆದು ಹೋಗೋಣವೆಂದು ನಿರ್ಧರಿಸಿ ಕಲ್ಲುಗಳ ರಾಶಿಯ ಮೇಲೆ ಕಾಲು ಹಾಕುತ್ತಾ ಹೊಗುವದೇ ಮಜವೆಂದು ಹಾಗೆ ಹೊರಟೆವು. ಬೇಸಿಗೆ ಸಮಯ ಕಲ್ಲುಗಳು ಅಷ್ಟೊಂದು ಜಾರುತ್ತಿರಲಿಲ್ಲ. ಆದರೂ ಕೆಲವು ಕಡೆ ಸ್ವಲ್ಪ ಎಡವುತ್ತಿತ್ತು. ಕಲ್ಲ ಮೇಲೆ ಕುಳಿತು ಹರಿಯುವ ನೀರಲ್ಲಿ ಕಾಲಾಡಿಸಿ ಅದರಿಂದಾಗುವ ಮುದಕ್ಕೆ ಪಾರವೇ ಇರಲಿಲ್ಲ.

ಕಾವೇರಿಯ ಈ ತೀರಕ್ಕೆ ಬಂದು ರಿವರ್ ರಾಫ್ಟಿಂಗ್ ಟಿಕೆಟ್ ತೆಗೆದುಕೊಂಡೆವು. ಬೇಸಗೆಯಲ್ಲಿ ನೀರು ಬಿರುಸಾಗಿ ಹರಿಯುವದಿಲ್ಲವಾದ್ದರಿಂದ ಸ್ಟಿಲ್ ರಿವರ್ ರಾಫ್ಟಿಂಗ್ ಮಾತ್ರ ಇತ್ತು. ಇದಕ್ಕೆ ದರ ಕಡಿಮೆ ಹಾಗೂ ಹೋಗುವ ದೂರ ಕೂಡ ಕಡಿಮೆ. ಮಳೆಗಾಲದಲ್ಲಿ 11 ಕಿ.ಮಿ. ರಿವರ್ ರಾಫ್ಟಿಂಗ್ ಇರುತ್ತದೆ.

ಎಲ್ಲಾ ಮುಗಿದು ಇನ್ನೇನು ಹೊರಡಬೇಕು ಆಗ ಈ ಸುಂದರ ಪ್ರಕೃತಿಯ ಮಡಿಲನ್ನು ಬಿಟ್ಟು ಹೋಗುವ ಮನಸ್ಸಾಗಲಿಲ್ಲ. ಆದರೆ ಒಲ್ಲದ ಮನಸ್ಸಿನಿಂದ ತಲಕಾವೇರಿ, ಭಾಗಮಂಡಲದ ಕಡೆಗೆ ಹೊರಟೆವು.

ಜನಸಂದಣಿ ಜಾಸ್ತಿ ಇದ್ದುದರಿಂದಲೋ ಏನೋ ಖಾಲಿ ಕುರ್ ಕುರೆ ಪಾಕೀಟ್, ನೀರಿನ ಬಾಟಲಿಗಳನ್ನು ಕಂಡ ಕಂಡಲ್ಲಿ ಕಾವೇರಿಯಲ್ಲೂ ಬೀಸಾಕಿದ್ದ ಜನರ ನಿರ್ಲಕ್ಷ ಮನ ನೊಂದಿತು. ಬಹುಶಃ ನೆಲದಲ್ಲಿ ಬಿಸಾಕುವ ಕಸ ನಿರ್ವಾಹಕರು ಶುಚಿಪಡಿಸುತ್ತಾರೋ ಏನೋ? ಆದರೆ ಕಾವೇರಿಯಲ್ಲಿ ಬಿಸಾಕುವ ಕಸ? ಅದು ಹಾಗೇ ತೇಲಿಕೊಂಡು ಕಾಡನ್ನು ತಲುಪುವದಿಲ್ಲವೇ?ಭೂ ತಾಯಿ ಉಟ್ಟಿದ್ದ ಹಸಿರು ಸೀರೆ ಹರಿದು ಚಿಂದಿ ಬಟ್ಟೆಯಾಗುತ್ತಿದೆ. ಆದರೆ ಕನಿಷ್ಟ ಆ ಚಿಂದಿ ಬಟ್ಟೆಯನ್ನಾದರೂ ಸರಿಯಾಗಿ ಉಳಿಸಿಕೊಳ್ಳುವ ಪ್ರಜ್ಞೆಯನ್ನು ಜನರಿಗೆ ಯಾವಾಗ ಈ ಪರಮಾತ್ಮ ಕೊಡುತ್ತಾನೋ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

ನೀವೂ ಸಹ ದುಬಾರೇ ಕಾಡಿಗೆ ಹೋಗಿ ಬನ್ನಿ. ಚಳಿಗಾಲ ಪ್ರಶಸ್ತ ಸಮಯ. ಬೇಸಗೆ ಕಾಲದಲ್ಲೂ ಪರವಾಗಿಲ್ಲ. ರಿವರ್ ರಾಫ್ಟಿಂಗ್ ಮಾಡಬೇಕಿದ್ದರೆ ಮಳೆಗಾಲದಲ್ಲಿ ಹೋಗಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.