ನೀವು ಅಪಾರ್ಟ್ಮೇಂಟು ಖರೀದಿ ಮಾಡುತ್ತಿದ್ದೀರ? ಅಥವಾ ಮನೆ ಖರೀದಿ ಮಾಡುತ್ತಿದ್ದೀರಾ? ಅಪಾರ್ಟ್ಮೆಂಟ್ ಒಳ್ಳೆಯದಾ? ಇಲ್ಲ ಪ್ರತ್ಯೇಕ ಮನೆನಾ? ಲಾಭ ನಷ್ಟಗಳೇನು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಲೇಖನ ಓದಿ.
ಅಪಾರ್ಟ್ಮೆಂಟ್ ಎಂದರೆ ಒಂದಕ್ಕಿಂತ ಹೆಚ್ಚು ಮನೆಗಳಿರುವ ಬಹುಮಹಡಿಯ ಕಟ್ಟಡ ಅನ್ನಬಹುದು. ಸಾಮಾನ್ಯವಾಗಿ ಒಂದು ಸೊಸೈಟಿ ಅಪಾರ್ಟ್ಮೆಂಟ್ ಅನ್ನು ನೋಡಿ ಕೊಳ್ಳುತ್ತದೆ. ಅಪಾರ್ಟ್ಮೆಂಟ್ ಗೆ ನೂರಾರು ಮಾಲೀಕರು. ಪ್ರತಿ ಕುಟುಂಬ ಅದರ ಒಂದು ಮಹಡಿಯ ಭಾಗ ಅಥವಾ ಒಂದು ಮಹಡಿ ಮಾತ್ರ ಅವರದ್ದಾಗಿರುತ್ತದೆ. ಹಾಗೂ ಯಾವುದೇ ಮುಖ್ಯ ನಿರ್ಧಾರಕ್ಕೆ ಬಹುಮತ ಬೇಕು. ಪ್ರತ್ಯೇಕ ಮನೆ ಎಂದರೆ ಜಾಗ ಹಾಗೂ ಇಡೀ ಕಟ್ಟಡಕ್ಕೆ ಒಂದೇ ಕುಟುಂಬ ಹಕ್ಕುದಾರರಾಗಿರುತ್ತಾರೆ.
ಯಾವುದು ಒಳ್ಳೆಯದು ಅಪಾರ್ಟ್ಮೆಂಟ ಅಥವಾ ಪ್ರತ್ಯೇಕ ಮನೆನಾ? ತಿಳಿದುಕೊಳ್ಳಲು ಈ ಲೇಖನ ಪೂರ್ತಿ ಓದಿ.
ಸೌಲಭ್ಯಗಳು
ಸೌಲಭ್ಯಗಳ ವಿಚಾರಕ್ಕೆ ಬಂದಾಗ ಅಪಾರ್ಟ್ಮೆಂಟ್ ಪ್ರತ್ಯೇಕ ಮನೆಗಿಂತ ಉತ್ತಮ. ಹಾಗಂತ ಎಲ್ಲಾ ಅಪಾರ್ಟ್ಮೆಂಟ್ ಅಲ್ಲಿ ಎಲ್ಲ ಸೌಲಭ್ಯಗಳು ಇದ್ದೇ ಇರುತ್ತೆ ಅನ್ನುವ ಹಾಗಿಲ್ಲ.
ಸಾಮಾನ್ಯವಾಗಿ ಅಪಾರ್ಟ್ಮೆಂಟ್ ಅಲ್ಲಿ ಈ ಮುಂದಿನ ಹಲವು ಸೌಲಭ್ಯಗಳಿರುತ್ತದೆ. ಕೆಲವದರಲ್ಲಿ ಎಲ್ಲವೂ ಇರಬಹುದು. ಅಥವಾ ಕೆಲವೇ ಕೆಲವು ಇರಬಹುದು.
- ಈಜು ಕೊಳ
- ಜಿಮ್
- ಸೆಕ್ಯುರಿಟಿ
- ಕಲ್ಯಾಣ ಮಂಟಪ / ಪಾರ್ಟಿ ಹಾಲ್
- ಪವರ್ ಬ್ಯಾಕಪ್ / ಕರೆಂಟ್ ಜೆನರೇಟರ್
- ಪಾರ್ಕಿಂಗ್ ಜಾಗ
- ಬೆಂಕಿ ಅನಾಹುತದಿಂದ ಸುರಕ್ಷತೆ
- ನೀರಿನ ಸೌಲಭ್ಯ
- ಪ್ರತ್ಯೇಕ ಪಾರ್ಕ್ ಅಥವಾ ಗಾರ್ಡನ್
- ಸೂಪರ್ ಮಾರ್ಕೆಟ್
ಈ ಮೇಲಿನ ಸೌಲಭ್ಯ ಪ್ರತ್ಯೇಕ ಮನೆಯಲ್ಲಿ ಹೊಂದುವದು ತುಂಬಾ ಕಷ್ಟ. ಅದಕ್ಕೆ ಜಾಸ್ತಿ ಖರ್ಚಾಗುತ್ತದೆ. ತುಂಬಾ ಜಾಗ ಬೇಕು.
ನಿರ್ಮಾಣ
ಪ್ರತ್ಯೇಕ ಮನೆ ಕಟ್ಟುವದು ಶ್ರಮದಾಯಕ. ಇದಕ್ಕೂ ಮೊದಲು ಸೂಕ್ತ ಜಾಗ ತೆಗೆದುಕೊಳ್ಳಬೇಕು. ಆಮೇಲೆ ಕಟ್ಟಡವನ್ನು ಕಾಂಟ್ರ್ಯಾಕ್ಟರ್ ಸಹಾಯದಿಂದ ಕಟ್ಟಿಸಿ ಕೊಳ್ಳಬೇಕು.
ಅಪಾರ್ಟ್ ಮೆಂಟ್ ಹಾಗಲ್ಲ ಎಲ್ಲವನ್ನೂ ಬಿಲ್ಡರ್ ಅಥವಾ ಕಂಪನಿಗಳೇ ಮಾಡಿ ಕೊಡುತ್ತವೆ. ಎಲ್ಲ ರೆಡಿ ಆದ ಮೇಲೆ ಇಂಟೀರಿಯರ್ ಕೆಲಸ ಮಾತ್ರ ಮಾಲೀಕರದ್ದು.
ಸಾಲ
ಬ್ಯಾಂಕಗಳು ಅಪಾರ್ಟ್ಮೆಂಟ್ ತೆಗೆದು ಕೊಳ್ಳಲು ಸುಲಭವಾಗಿ ಸಾಲ ಕೊಡುತ್ತವೆ. ಯಾಕೆಂದರೆ ಫ್ಲಾಟ್ ಬೆಲೆ ಎಷ್ಟು ಎಂದು ಬಿಲ್ಡರ್ ನಿಗದಿ ಪಡಿಸಿ ಘೋಷಿಸಿರುತ್ತಾನೆ. ಆದರೆ ಪ್ರತ್ಯೇಕ ಮನೆಗೆ ಎಷ್ಟು ಖರ್ಚಾಗುತ್ತೆ ಎಂದು ಹೇಳುವದು ಮೊದಲೇ ಹೇಳುವದು ಕಷ್ಟ. ಅದಕ್ಕೆ ಬ್ಯಾಂಕ್ ಸಲ ಪಡೆಯಲು ಹಲವು ದಾಖಲೆ ಅಥವಾ ಜಾಗದ ಕಾಗದ ಪತ್ರ ಅಡವಿಡಬೇಕು.
ಖರ್ಚು
ಅಪಾರ್ಟ್ಮೆಂಟ್ ಗಳ ಬೆಲೆ ಪ್ರತ್ಯೇಕ ಮನೆಗಿಂತ ಕಡಿಮೆ. ಪ್ರತ್ಯೇಕ ಮನೆಗೆ ಮೊದಲು ಜಾಗ ಆಮೇಲೆ ನಿರ್ಮಾಣ ಖರ್ಚಾಗುತ್ತದೆ. ಅಷ್ಟೇ ಅಲ್ಲ ಪ್ರತ್ಯೇಕ ಮನೆಯ ನಿರ್ವಹಣೆ ಖರ್ಚು ಸಹ ಜಾಸ್ತಿ. ಅಪಾರ್ಟ್ಮೆಂಟ್ ಅಲ್ಲಿ ಈ ಖರ್ಚುಗಳು ಹಂಚಿ ಹೋಗುತ್ತವೆ.
ಅಪಾರ್ಟ್ಮೆಂಟ್ ಅಲ್ಲಿ ಪ್ರತಿ ತಿಂಗಳು ಮೇಂಟೆನೆನ್ಸ್ ಚಾರ್ಜ್ ಕಟ್ಟಬೇಕು. ನೀವು ಅಲ್ಲಿನ ಸೌಲಭ್ಯ ಬಳಸಿ ಅಥವಾ ಬಿಡಿ ಆದರೂ ಕತ್ತಲೆ ಬೇಕು. ಈ ಚಾರ್ಜ್ ವರ್ಷ ಕಳೆದಂತೆ ಜಾಸ್ತಿ ಆಗಬಹುದು.
ಮಾರಾಟ
ಅಪಾರ್ಟ್ಮೆಂಟ್ ಬೆಲೆ ಕಡಿಮೆ ಆದುದರಿಂದ ಮಾರಾಟ ಸುಲಭ. ಆದರೆ ಪ್ರತ್ಯೇಕ ಮನೆ ಮಾರಾಟಕ್ಕೆ ಸಮಯ ಬೇಕು. ಆದರೆ ಸಮಯ ಕಳೆದಂತೆ ಅಪಾರ್ಟ್ಮೆಂಟ್ ಹಳತಾದಾಗ ಅದರ ಬೆಲೆ ಕಡಿಮೆ ಆಗುತ್ತದೆ. ಆದರೆ ಪ್ರತ್ಯೇಕ ಮನೆ ಹಳತಾದರೂ ಜಗದ ಬೆಲೆ ಜಾಸ್ತಿ ಆಗಿ ಉತ್ತಮ ಬೆಲೆ ಸಿಗಬಹುದು. ಅಪಾರ್ಟ್ಮೆಂಟ್ ಬಿಲ್ಡಿಂಗ್ ಸಾಮಾನ್ಯವಾಗಿ ೩೦ ರಿಂದ ೫೦ ವರ್ಷ ಹಳೆತಾದರೆ ಅದು ದುರ್ಬಲವಾಗಿ ಗುಣಮಟ್ಟ ಕುಸಿಯುತ್ತದೆ. ಆಗ ಮೌಲ್ಯ ಕೂಡ ಕಡಿಮೆಯಾಗಿ ಮಾರಾಟ ಕಷ್ಟ. ಪ್ರತ್ಯೇಕ ಮನೆಯನ್ನು ಚೆನ್ನಾಗಿ ನಿರ್ವಹಿಸಿದರೆ ಇನ್ನೂ ಬಾಳಿಕೆ ಬರುತ್ತದೆ. ಪ್ರತ್ಯೇಕ ಮನೆ ಕೆಡವಿ ಮತ್ತೆ ಕಟ್ಟಿಸಲು ಒಂದು ಕುಟುಂಬದ ನಿರ್ಧಾರ ಸಾಕು. ಅಪಾರ್ಟ್ಮೆಂಟ್ ಕೆಡವಿ ಕಟ್ಟಿಸಲು ನೂರಾರು ಕುಟುಂಬದ ಒಮ್ಮತ / ಒಪ್ಪಿಗೆ ಬೇಕು.
ಜಾಗ
ಅಭಿವೃದ್ಧಿಗೊಂಡ ಜಾಗದಲ್ಲಿ ಮೆಟ್ರೋ ಸಿಟಿಗಳಲ್ಲಿ ಅಪಾರ್ಟ್ಮೆಂಟ್ ಸಿಗುತ್ತದೆ. ನಗರ ಪ್ರದೇಶಕ್ಕೆ ಹೆಚ್ಚಿನ ಜನರ ವಲಸೆ ಹಾಗೂ ಜನಸಂಖ್ಯೆ ಹೆಚ್ಚಳದಿಂದಾಗಿ ನೆಲದ ಬೆಲೆ ಗಗನಕ್ಕೇರಿತು. ಆಗ ಅಪಾರ್ಟ್ಮೆಂಟ್ ಮಾತ್ರ ಸಾಮಾನ್ಯ ಜನರಿಗೆ ಎಟುಕುವಂತಾಯ್ತು. ಬಿಡಿಎ ಸೈಟು ಹೊರತು ಪಡಿಸಿದರೆ ಬೇರೆ ಪ್ರತ್ಯೇಕ ಮನೆ ಖರೀದಿ ಸಮಯದಲ್ಲಿ ಜಾಗದ ವಿಚಾರದಲ್ಲಿ ಮೋಸದ ಸಾಧ್ಯತೆ ಇದೆ. ಉದಾಹರಣೆಗೆ ಲಿಟಿಗೇಶನ್ ಇರಬಹುದು. ಕೆರೆ ಅಥವಾ ಸರಕಾರಿ ಅಥವಾ ಅರಣ್ಯ ಜಾಗ ಇದ್ದು ಸರಕಾರ ವಶಪಡಿಸಿಕೊಳ್ಳಬಹುದು. ಅಪಾರ್ಟ್ಮೆಂಟ್ ಕೂಡ ಕೆರೆ ಅಥವಾ ತಗ್ಗು ಜಾಗದಲ್ಲಿ ಕಟ್ಟಿದ್ದು ನೀರು ತುಂಬಿ ಹೋಗುವ ಸಾಧ್ಯತೆ ಇದೆ. ಅಪಾರ್ಟ್ಮೆಂಟ್ ಎತ್ತರದಲ್ಲಿದ್ದು ಗಾಳಿ, ಬೆಳಕು ಚೆನ್ನಾಗಿ ಬರುತ್ತದೆ. ಪ್ರತ್ಯೇಕ ಮನೆಗೆ ತಾಗಿ ಸುತ್ತಲೂ ಮನೆ ಇದ್ದರೆ ಗಾಳಿ ಬೆಳಕು ಕಡಿಮೆ.
ಗುಣಮಟ್ಟ / ಬಾಳಿಕೆ
ಅಪಾರ್ಟ್ಮೆಂಟ್ ಗುಣಮಟ್ಟ ಹಾಗೂ ಬಾಳಿಕೆ ಬಿಲ್ಡರ್ ಮೇಲೆ ಅವಲಂಭಿತವಾಗಿದೆ. ನೀವು ನಿಮ್ಮ ಹಲವು ಪೀಳಿಗೆ ಅನುಭವಿಸುವಂತಹ ಆಸ್ತಿ ಮಾಡಲು ಯೋಚಿಸುತ್ತಿದ್ದರೆ ಪ್ರತ್ಯೇಕ ಮನೆ ಉತ್ತಮ. ಯಾಕೆಂದರೆ ಒಂದು ಪ್ಲಾಟ್ ಹೆಚ್ಚೆಂದರೆ ೩೦-೫೦ ವರ್ಷ ಬಾಳಿಕೆ ಬರಬಹುದು.
ಪ್ರತ್ಯೇಕ ಮನೆಯಲ್ಲಿ ಖಾಸಗಿತನ ಜಾಸ್ತಿ. ಅಪಾರ್ಟ್ಮೆಂಟ್ ಅಲ್ಲಿ ಕಡಿಮೆ. ಆದರೆ ಅಪಾರ್ಟ್ಮೆಂಟ್ ಅಲ್ಲಿ ಗೆಳೆತನ ಸುಲಭ. ಹೆಚ್ಚಿನ ಕುಟುಂಬಗಳು ಒಟ್ಟಿಗೆ ವಾಸಿಸುವದರಿಂದ ಮಕ್ಕಳಿಗೆ ಸ್ನೇಹಿತರು ಸಹ ಸುಲಭವಾಗಿ ಸಿಗುತ್ತಾರೆ.
ನೀವು ನಿಮ್ಮ ಹಲವು ಪೀಳಿಗೆ ಅನುಭವಿಸುವಂತಹ ಆಸ್ತಿ ಮಾಡಲು ಯೋಚಿಸುತ್ತಿದ್ದರೆ ಪ್ರತ್ಯೇಕ ಮನೆ ಉತ್ತಮ. ಆದರೆ ಕಡಿಮೆ ಬೆಲೆ, ಉತ್ತಮ ಸೌಲಭ್ಯಕ್ಕಾಗಿ ಅಪಾರ್ಟ್ಮೆಂಟ್ ಸೂಕ್ತ.ಹೀಗೆ ಅಪಾರ್ಟ್ಮೆಂಟ್ ಹಾಗೂ ಪ್ರತ್ಯೇಕ ಮನೆ ಎರಡೂ ಗುಣ / ಅವಗುಣ ಹೊಂದಿದೆ.
ಅಪಾರ್ಟ್ಮೆಂಟ್
ಲಾಭಗಳು
- ಹೆಚ್ಚಿನ ಸೌಲಭ್ಯ
- ಕಡಿಮೆ ಬೆಲೆ
- ಕಟ್ಟುವ ತಲೆಬಿಸಿ ಇಲ್ಲ
- ಸಾಲ ಸುಲಭ
- ಉತ್ತಮ ಗಾಳಿ, ಬೆಳಕು
- ಗೆಳೆತನ ಸುಲಭ
ನಷ್ಟಗಳು
- ೩೦-೫೦ ವರ್ಷಕ್ಕೆ ಅಪಾರ್ಟ್ಮೆಂಟ್ ದುರ್ಬಲ ಆಗ ಬಹುದು.
- ಪ್ರತಿ ತಿಂಗಳು ಮೇಂಟೆನೆನ್ಸ್ ಚಾರ್ಜ್ ಕಟ್ಟಬೇಕು.
- ಗುಣಮಟ್ಟ ಮತ್ತು ಬಾಳಿಕೆ ಬಿಲ್ಡರ್ ಮೇಲೆ ಅವಲಂಭಿತ.
- ಯಾವುದೇ ಬದಲಾವಣೆಗೆ ಹಲವು ಕುಟುಂಬದ ಒಪ್ಪಿಗೆ ಬೇಕು.
- ಖಾಸಗಿತನ ಕಡಿಮೆ
ಪ್ರತ್ಯೇಕ ಮನೆ
ಲಾಭಗಳು
- ಹಲವು ಪೀಳಿಗೆಗೆ ಬರುವಂತಹ ಆಸ್ತಿ
- ಮೇಂಟೆನೆನ್ಸ್ ಚಾರ್ಜ್ ಕಟ್ಟಬೇಕಿಲ್ಲ
- ಬದಲಾವಣೆಗೆ ಒಂದು ಕುಟುಂಬದ ನಿರ್ಧಾರ ಸಾಕು.
- ಖಾಸಗಿತನ ಜಾಸ್ತಿ.
ನಷ್ಟಗಳು
- ಬೆಲೆ ಜಾಸ್ತಿ
- ಕಟ್ಟುವ ತಲೆ ಬಿಸಿ.
- ಸಾಲ ಕಷ್ಟ. ಜಾಗ ಅಡವಿಡಬೇಕು.
- ಕಡಿಮೆ ಸೌಲಭ್ಯ
- ಮನೆಗಳು ಹತ್ತಿರದಲ್ಲಿದ್ದರೆ ಗಾಳಿ ಬೆಳಕು ಕೊರತೆ.
- ಗೆಳೆತನ ಅಪಾರ್ಟ್ಮೆಂಟ್ ಅಷ್ಟು ಸುಲಭ ಎಲ್ಲ ಕಡೆ ಅಲ್ಲ.