ಸೆಪ್ಟೆಂಬರ್ 4, 2020
ಎಂತಹ ಜಾಗ ಸೂಕ್ತ

ಮನೆ ನಿರ್ಮಾಣ ೩ : ಎಂತಹ ಜಾಗ ಸೂಕ್ತ?

ಸ್ನೇಹಿತರಿಗೆ ಹಂಚಿಕೊಳ್ಳಿ

ಮನೆಯ ವಿನ್ಯಾಸ ಎಷ್ಟು ಮುಖ್ಯವೋ ಹಾಗೇ ಮನೆ ಕಟ್ಟುವ ಜಾಗ ಅಷ್ಟೇ ಮುಖ್ಯ . ಉತ್ತಮ ಗಾಳಿ ಬೆಳಕು ಬರುವ ಜಾಗದಲ್ಲಿ ಉತ್ತಮ ಹವಾಮಾನ  ಇರುವ ಪ್ರದೇಶದಲ್ಲಿ ಮನೆ ಕಟ್ಟಿದಾಗ ಆ ಅನುಭವವೇ ಬೇರೆ.

ಎಂತಹ ಜಾಗ ಸೂಕ್ತ?

 ನೀರಿನ ಮೂಲಕ್ಕೆ ಹತ್ತಿರವಾಗಿರಬೇಕು

ನೀರು ಮನೆ ಕಟ್ಟಲು ಹಾಗೂ ಅಲ್ಲಿ ಉಳಿಯಲು ತುಂಬಾ ಅತಿ ಅವಶ್ಯಕ. ಬಾವಿ ಕೆರೆ ಬೋರ್ವೆಲ್ ಅಥವಾ ನದಿ ಮೊದಲಾದ ಮೂಲಗಳಿಂದ ನೀರು ಲಭ್ಯ ಇರಬೇಕು ಆದರೆ ಪ್ರವಾಹ ಬರುವಂತಹ ಜಾಗ ಕೂಡ ಆಗಿರಬಾರದು.

ಜಾಗ ಆದಷ್ಟು ಸಮತಟ್ಟಾಗಿರಬೇಕು

ಮನೆ ಕಟ್ಟಿದ ಜಾಗ ಅಂಗಳ ಸುತ್ತಮುತ್ತಲಿನ ಜಾಗ ಸಮತಟ್ಟಾಗಿದ್ದರೆ ಮಾತ್ರ ಅನುಕೂಲ ಜಾಸ್ತಿ.  ಇಲ್ಲದಿದ್ದರೆ ಸಮತಟ್ಟು ಮಾಡಲು ಖರ್ಚಾಗಬಹುದು.  

ಜಾಗ ಗಟ್ಟಿಯಾಗಿರಬೇಕು

ಮನೆ ಕುಸಿಯದಂತೆ ತಳಪಾಯ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ನೆಲ ಗಟ್ಟಿಯಾಗಿರಬೇಕು. 

ಪ್ರಶಾಂತವಾಗಿರುವ ವಾತಾವರಣ ಇರುವ ಕಡೆ

ಪ್ರಶಾಂತವಾದ ವಾತಾವರಣ ಇರುವ ಗದ್ದಲ ಗೌಜಿ ಇಲ್ಲದಂತಹ ಪ್ರದೇಶ ಮನೆ ಕಟ್ಟಲು ಸೂಕ್ತ. ದುಡಿದು ಮನೆಗೆ ಬಂದು ವಿಶ್ರಾಂತಿ ಪಡೆಯಲು ಇಂತಹ ವಾತಾವರಣ ಬೇಕೆ ಬೇಕು .

ಉತ್ತಮ ರಸ್ತೆ ಇರುವ ಕಡೆ

ರಸ್ತೆ ಅನ್ನುವುದು ನಮ್ಮ ರಕ್ತ ನಾಡಿಯಿದ್ದಂತೆ ಉತ್ತಮ ರಸ್ತೆ ನಮ್ಮ ಮನೆಗೆ ತಲುಪಲು ಅಲ್ಲಿಂದ ಹೋಗಿ ಬರಲು ತುಂಬಾ ಸಹಾಯಕವಾಗುತ್ತದೆ . ಮನೆ ಕಟ್ಟುವುದರಿಂದ ಹಿಡಿದು ವಾಹನಗಳ ಓಡಾಟಕ್ಕೆ ರಸ್ತೆ ಇರಲೇಬೇಕು. 

ಉತ್ತಮ ಸೌಲಭ್ಯ ಇರುವ ಕಡೆ 

ಆಸ್ಪತ್ರೆ, ಶಾಲೆ, ಕಾಲೇಜು, ಹೋಟೆಲ್ ಹಾಗೂ   ಅಂಗಡಿಗಳು ಹತ್ತಿರದಲ್ಲಿ ಲಭ್ಯವಿರುವ ಕಡೆ  ಮನೆ ಕಟ್ಟಿದರೆ ಒಳ್ಳೆಯದು. ಅಗತ್ಯ ಸೌಲಭ್ಯಗಳ ಅವಶ್ಯಕತೆ ಇದ್ದಾಗ ಇವು ಸಹಾಯಕ. ಆಫೀಸು ಅಥವಾ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದರೆ ಅದು ಹತ್ತಿರದಲ್ಲಿದ್ದರೆ   ಒಳ್ಳೆಯದು.

ಇಂತಹ ಜಾಗ ಸೂಕ್ತ ಅಲ್ಲ 

ಸ್ಮಶಾನಕ್ಕೆ ಹತ್ತಿರ ಇರಬಾರದು

ಸಾವನ್ನು ತಪ್ಪಿಸಿಕೊಳ್ಳಲು ಯಾರಿಂದ ಸಾಧ್ಯ? ಹಾಗಂತ ದಿನ ಹೆಣ ನೋಡುವ ಗ್ರಹಚಾರ ಯಾರಿಗೆ ಬೇಕು? ಸ್ಮಶಾನದ ಪಕ್ಕ ಅಥವಾ ದಾರಿಯಲ್ಲಿ ಮನೆ ಇರದಿರುವದು ವಾಸಿ.

ಮೋರಿಯ ಪಕ್ಕ ಇರಬಾರದು 

ಮೋರಿಯಲ್ಲಿ ಹರಿಯುವ ಗಲೀಜು ನೀರು ಉಕ್ಕಿ ಮನೆ ಕಡೆ ಬಂದರೆ ಗತಿ? ಅದೇ ರೀತಿ ಮೋರಿಯಲ್ಲಿ ಕುಳಿತು ಬರುವ ಸೊಳ್ಳೆಗಳು ಹುಳ ಹುಪ್ಪಡಿಗಳು ಸಹಾ ಒಳ್ಳೆಯದಲ್ಲ.ಅಷ್ಟೇ ಅಲ್ಲ ಮೋರಿ ಪಕ್ಕ ದುರ್ವಾಸನೆಯ ಆಗರ ಮೂಗಿ ಮುಚ್ಚಿಕೊಂಡು ಬದುಕುವಂತಹ ಪರಿಸ್ಥಿತಿ ಕೂಡ. 

ಗುಡ್ಡದ ಕೆಳಗೆ ಇರಬಾರದು

ಗುಡ್ಡದ ಮೇಲಿನಿಂದ ಬೀಳುವ ಕಲ್ಲುಗಳು ಮರಗಳು ಮಳೆಗಾಲದಲ್ಲಿ ಕುಸಿಯುವ ಗುಡ್ಡಗಳು ಎಲ್ಲವೂ ಮನೆಗೆ ಅಪಾಯ 

ಕೆರೆಯ ಜಾಗದಲ್ಲಿ, ತಗ್ಗು ಪ್ರದೇಶದಲ್ಲಿ 

ಮಳೆಗಾಲದಲ್ಲಿ ಕೆರೆ ತುಂಬಿ ಮನೆಗೆ ನೀರು ಬಂದರೆ ತಗ್ಗು ಪ್ರದೇಶದಲ್ಲಿ ನೀರು ನಿಂತು ಮನೆಯನ್ನು ಆವರಿಸಬಹುದು ಆದ್ದರಿಂದ ಇಂತಹ ಜಾಗ ಆಯ್ಕೆ ಮಾಡದಿರುವುದು ಒಳಿತು .

ಸಮುದ್ರ ತೀರದ ಬಳಿ 

ಸಮುದ್ರ ತೀರದ ಬಳಿ ವಾತಾವರಣದಲ್ಲಿ ಉಪ್ಪಿನಂಶ ಜಾಸ್ತಿ ಇರುತ್ತದೆ ಅವು ತುಕ್ಕು ಹಿಡಿದು ವಸ್ತುಗಳು ಹಾಳಾಗಲು ಕಾರಣವಾಗುತ್ತದೆ.  ಜೊತೆಗೆ ದಿನವಿಡಿ  ಅಲೆಗಳ ಮೊರೆತ ಕೂಡ. 

ಗುಡ್ಡದ ಮೇಲೆ ಅಂಚಲ್ಲಿ

ಗುಡ್ಡದ ಮೇಲೆ ಹತ್ತುವದು ಕಷ್ಟ. ತಳಪಾಯ ಸರಿ ಇಲ್ಲದಿದ್ದರೆ  ಬೀಳುವ ಸಾಧ್ಯತೆ. 

ಸಡಿಲ ಮಣ್ಣಿರುವ ಜಾಗದಲ್ಲಿ

ಸಡಿಲ ಮಣ್ಣಿನಲ್ಲಿ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ. ಹಿಂದೆ  ಕೆರೆ ಇದ್ದ ಜಾಗ ಮೆತ್ತಗಿದ್ದು ಕಟ್ಟಡದ ತಳಪಾಯ ಕುಸಿಯುವ ಸಾಧ್ಯತೆ ಹೆಚ್ಚು . ಹಾಗೆ ಆಗದಂತೆ ತಳಪಾಯದ ವಿನ್ಯಾಸ ಮಾಡ ಬೇಕು.

ನೀರಿಲ್ಲದ ಜಾಗದಲ್ಲಿ

ನೀರು ಜೀವಿಗಳಿಗೆ ಅತಿ ಮುಖ್ಯವಾದ  ವಸ್ತು. ಕುಡಿಯುವುದಕ್ಕಾಗಿ ಇರಬಹುದು ಅಥವಾ ಸ್ನಾನಕ್ಕಾಗಿರಬಹುದು ನೀರು ಬೇಕೇ ಬೇಕು. ಬಾವಿ ಬೋರ್ವೆಲ್ ಅಥವಾ ಕಾರ್ಪೊರೇಷನ್ ನೀರಿನ ಮೂಲ ಇದ್ದ ಕಡೆ ಮಾತ್ರ ಮನೆ ಕಟ್ಟಿ. ಇಲ್ಲದಿದ್ದರೆ ಬದುಕುವುದು ದುಸ್ತರವಾಗುತ್ತದೆ.

ಮೈಕ್ ಹಾಕಿ ಕಾರ್ಯಕ್ರಮ ನಡೆಸುವ ಜಾಗಗಳು

ಸಾರ್ವಜನಿಕವಾಗಿ ಮೈಕ್ ಹಾಕಿ ಕಾರ್ಯಕ್ರಮ ನಡೆಸುವಂತಹ ಯಾವುದೇ ಜಾಗದ ಹತ್ತಿರ ಮನೆ ಕಟ್ಟುವುದು ಅಷ್ಟೊಂದು ಸೂಕ್ತವಲ್ಲ ಕಾರಣ ಇಷ್ಟೇ  ಇಂತಹ ಕಾರ್ಯಕ್ರಮ ನಡೆಯುವಾಗ ಮಕ್ಕಳಿಗೆ ಪರೀಕ್ಷೆ ಅಥವಾ ಇನ್ನಿತರ ಅವಶ್ಯಕತೆ ಇದ್ದಾಗ ಈ ಈ ಮೈಕ್ ಸದ್ದು ಗಲಾಟೆ ಎನಿಸಬಹುದು ಶಾಂತತೆಗೆ ಭಂಗ ತರಬಹುದು.

ವಿಷ ಕಾರುವ ಕಾರ್ಖಾನೆ ಪಕ್ಕ

ಹೊಗೆ ಕಾರುವ ಕಾರ್ಖಾನೆ ಇರಬಹುದು ಅಥವಾ ಪಟಾಕಿ ಸಿಡಿಮದ್ದು ಮೊದಲಾದ ಹಾನಿಕಾರಕ ವಸ್ತುಗಳ ನಿರ್ಮಾಣ ಕಂಪನಿ ಸಹ ಇರಬಹುದು. ಪೆಟ್ರೋಲ್ ಬಂಕ್ ಇರಬಹುದು ಹಾನಿಕಾರಕ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸುವ  ಗೋಡೌನ ಇರಬಹುದು ಇವುಗಳ ಪಕ್ಕ ಮನೆ ಕಟ್ಟುವುದು  ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ .

ಕಾಡಿನ ಮಧ್ಯೆ ಅಥವಾ ಅಂಚಿನಲ್ಲಿ

ದುರ್ಗಮ ಅರಣ್ಯದಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಮನೆ ಕಟ್ಟುವುದು ಒಳ್ಳೆಯದಲ್ಲ ಯಾಕೆಂದರೆ ಕಾಡು ಪ್ರಾಣಿಗಳ ಆಕ್ರಮಣ ಹಾಗೂ ದುಷ್ಟ ಜಂತುಗಳಿಂದ ಅಪಾಯ ಯಾವಾಗಲೂ ಇದ್ದೇ ಇದೆ . ಸಾಧ್ಯವಾದಷ್ಟು ಕಾಡಿನಿಂದ ದೂರದಲ್ಲಿ ನಗರದಲ್ಲಿಯೂ ಅಥವಾ ಚಿಕ್ಕ ಪಟ್ಟಣದಲ್ಲಿ ಮನೆ ಕಟ್ಟುವುದು ಒಳಿತು .

ನದಿಯ ತೀರದಲ್ಲಿ 

ನದಿಯ ತೀರ ಕೂಡ ಮನೆ ಕಟ್ಟಲು ಸೂಕ್ತ ಜಾಗವಲ್ಲ ಯಾಕೆಂದರೆ ಮಳೆಗಾಲದಲ್ಲಿ ಪ್ರವಾಹ ಬಂದು ಮನೆಗೆ ಅಪಾಯ ಅಥವಾ ಮನೆಯ ಒಳಗೆ ನೀರು ನುಗ್ಗುವ ಸಾಧ್ಯತೆ ಇದೆ.

ಮರುಭೂಮಿಯಲ್ಲಿ

ಮರುಭೂಮಿ ಅಥವಾ ಹವಾಮಾನ ತಾಪ ತುಂಬಾ ಅತಿ ಇರುವಲ್ಲಿಯೂ ಕೂಡ ಮನೆ ಕಟ್ಟುವುದು ಸೂಕ್ತವಲ್ಲ . ನೀರಿನ ಕೊರತೆ ತಡೆಯಲಾರದಷ್ಟು ಸೆಕೆ ಕೂಡಾ ಅಲ್ಲಿ ಉಳಿಯುವುದು  ಕಷ್ಟವಾಗುತ್ತದೆ .

ವಿಷಮ ವಾತಾವರಣ ಇರುವ ಜಾಗ

ಅತಿಯಾದ ಮಳೆ ಅತಿಯಾದ ಸೆಕೆ ಹಾಗೂ ಅತಿಯಾದ ಚಳಿ ಇರುವಂತಹ ಜಾಗವೂ ಕೂಡ ಮನೆ ಕಟ್ಟಲು ಸೂಕ್ತವಲ್ಲ ಆದರೆ ಕೆಲವೊಮ್ಮೆ ಅನಿವಾರ್ಯವಾದರೆ ಬೇರೆ ಗತಿ ಇಲ್ಲ ಆದರೂ ಸಾಧ್ಯವಿದ್ದಷ್ಟೂ ಉತ್ತಮ ವಾತಾವರಣ ಜಾಗ ಆರಿಸಿಕೊಳ್ಳುವುದು ಒಳ್ಳೆಯದು .

ಕಸ ಹಾಕುವ ಜಾಗ

ಸಾಮಾನ್ಯವಾಗಿ ಶಹರಗಳಲ್ಲಿ ಊರಿನಲ್ಲಿ ಉಂಟಾದ ಎಲ್ಲ ಕಸವನ್ನು ಸಂಗ್ರಹಿಸಿ ಊರ ಹೊರಗೆ ಒಂದು ಜಾಗದಲ್ಲಿ ಹಾಕಿ ಅದನ್ನು ಸಂಸ್ಕರಿಸುತ್ತಾರೆ ಅಥವಾ ಸುಟ್ಟು ಹಾಕುತ್ತಾರೆ ಅಂತಹ ಜಾಗವನ್ನು ಮನೆಕಟ್ಟಲು ಆಯ್ದು ಕೊಳ್ಳದಿರುವುದು ಒಳ್ಳೆಯದು. 

ಅನೇಕ ಬಾರಿ ಎಲ್ಲವು ಸರಿ  ಇರುವ ಕೊರತೆ ಇರದ ಜಾಗ ಸಿಗುವದು ಕಷ್ಟ. ಆಗ ಹೊಂದಾಣಿಕೆ ಅನಿವಾರ್ಯ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.