ಆಗಷ್ಟ್ 24, 2020

ಆನ್ಲೈನ್ ಶಿಕ್ಷಣ ಬೇಕೆ ಬೇಡವೇ?

ಸ್ನೇಹಿತರಿಗೆ ಹಂಚಿಕೊಳ್ಳಿ

ಇತ್ತೀಚಿಗೆ ಕರೋನ ವೈರಸ್ ಭೀತಿಯಿಂದ ಶಾಲಾ-ಕಾಲೇಜುಗಳನ್ನು ಮುಚ್ಚಿದ್ದರು. ಆಗ ಆರಂಭವಾಗಿದ್ದು ಖಾಸಗಿ ಶಾಲೆಗಳ ಆನ್ಲೈನ್ ಶಿಕ್ಷಣ. ಇದಕ್ಕೆ ಅನೇಕ ಜನರ ವಿರೋಧ.ಕರ್ನಾಟಕ ಸರಕಾರದಿಂದ ಒಂದರಿಂದ ಏಳನೇ ತರಗತಿಯವರೆಗೆ ಬ್ಯಾನ್ ಮಾಡಲು ನಿರ್ಧಾರ.

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಆನ್ಲೈನ್ ಶಿಕ್ಷಣ ಕ್ರಾಂತಿಯನ್ನೇ ಮಾಡಬಲ್ಲದು. ಕೆಲವೇ ಜನರು ಶಿಕ್ಷಣವನ್ನು ಕಪಿಮುಷ್ಠಿಯಲ್ಲಿ ಇಟ್ಟಿದ್ದು ಕಡಿಮೆ ಮಾಡಿ ಶಿಕ್ಷಣವನ್ನು ಜನರು ಸುಲಭವಾಗಿ ಕಡಿಮೆ ಬೆಲೆಯಲ್ಲಿ ಪಡೆಯುವಂತೆ ಮಾಡಬಲ್ಲದು. ಹೇಗೆ ಎಂಬುದನ್ನು ತಿಳಿಯಲು ಈ ಲೇಖನ ಮುಂದೆ ಓದಿ.

ಮೊದಲು ಕೋವಿಡ್ – 19ರ ಮುಂಚೆ ಇರುವ ಶಿಕ್ಷಣದ ಬಗ್ಗೆ ನೋಡೋಣ. ಒಂದು ಕಡೆ ಸರಿಯಾದ ಸೌಲಭ್ಯ ಶಿಕ್ಷಕರು ಇಲ್ಲದ ಸರಕಾರಿ ಶಾಲೆಗಳು. ಒಂದೆರಡು ಶಾಲೆಗಳು ಇದಕ್ಕೆ ಅಪವಾದ ಇರಬಹುದು. ಇನ್ನೊಂದು ಕಡೆ ಉತ್ತಮ ಸೌಲಭ್ಯ ಕಲಿಕೆ ಇರುವ ಖಾಸಗಿ ಶಾಲೆಗಳು. ಸ್ಪರ್ಧೆ ಇಲ್ಲದ ಕಾರಣ ಹಾಗೂ ನಡೆಸಲು ಹಾಕಿದ ದೊಡ್ಡ ಬಂಡವಾಳ ಕಾರಣ ಹೆಚ್ಚಿನ ಫೀ ಮತ್ತು ಡೊನೇಶನ್ ಪಡೆಯುವ ಖಾಸಗಿ ಶಾಲೆಗಳು. ಇನ್ನು ಉನ್ನತ ಶಿಕ್ಷಣ ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ಎಂಬಿಎ ಮೊದಲಾದ ಶಿಕ್ಷಣಗಳು ಸಹ ಕೈಗೆ ಎಟುಕದಷ್ಟು ದುಬಾರಿಯಾಗುತ್ತಿದೆ. ಇನ್ನು ವಿದೇಶಿ ಶಿಕ್ಷಣ ಕೂಡ 30ರಿಂದ 50 ಲಕ್ಷದ ಖರ್ಚು ಮಾಡಿಸುತ್ತವೆ.

ಆಫ್ಲೈನ್ ಶಿಕ್ಷಣ ಯಾಕೆ ದುಬಾರಿ?

ಆಫ್ಲೈನ್ ಶಿಕ್ಷಣ ಎಂದರೆ ಸಾಂಪ್ರದಾಯಿಕ ಕ್ಲಾಸ್ ರೂಮಿನಲ್ಲಿ ಶಿಕ್ಷಕರು ಕಲಿಸುವದು. ಈ ಮಾದರಿ ಕೆಲವೊಮ್ಮೆ ತುಂಬ ದುಬಾರಿ. ಸಂಸ್ಥೆ ನಡೆಸಲು ಖರ್ಚು ಜಾಸ್ತಿ ಹಾಗೂ ವಿದ್ಯಾರ್ಥಿಗಳಿಗೂ ಉಳಿಯಲು, ಸಾರಿಗೆ ಖರ್ಚು, ಟ್ಯೂಶನ್ ಖರ್ಚು ಇರುತ್ತದೆ.

ನಡೆಸಲು ಜಾಸ್ತಿ ಬಂಡವಾಳ ಬೇಕು

ಆಫ್ಲೈನ್ ಶಿಕ್ಷಣಕ್ಕೆ ಬಿಲ್ಡಿಂಗ್, ಲ್ಯಾಬೋರೇಟರಿ, ಶಿಕ್ಷಕರು ತುಂಬಾ ಜಾಸ್ತಿ ಬಂಡವಾಳ ಬೇಕು.

ಬೇರೆ ಊರಿಗೆ ಹೋಗಿ ಉಳಿಯಬೇಕು

ವಿದ್ಯಾರ್ಥಿಗಳು ಶಾಲಾ ಕಾಲೇಜು ಇರುವ ಊರಿಗೆ ಹೋಗಿ ಬಾಡಿಗೆ ಮನೆ, ಹಾಸ್ಟೆಲ್ ಅಥವಾ ನೆಂಟರ ಮನೆಯಲ್ಲಿ ಉಳಿದುಕೊಳ್ಳಬೇಕು. ಇದಕ್ಕೂ ಸಹ ಖರ್ಚಾಗುತ್ತದೆ.

ಓಡಾಡಲು ವಾಹನದ ಖರ್ಚು

ಕೆಲವೊಮ್ಮೆ ಬಸ್, ಟ್ರೈನ್, ವಾಹನದಲ್ಲಿ ಹೋಗಲು ಸಮಯ ಹಣ ಖರ್ಚಾಗುತ್ತದೆ.

ಟ್ಯೂಶನ್ ಬೇಕಾಗಬಹುದು

ಒಮ್ಮೆ ಕಲಿಸಿದ್ದು ಅರ್ಥವಾಗದಿದ್ದರೆ ಬೇರೆ ಕಡೆ ಮತ್ತೊಮ್ಮೆ ಪಾಠ ಹೇಳಿಸಿಕೊಳ್ಳಲು ಟ್ಯೂಷನ್ ಸೇರಬೇಕಾದ ಬಹುದು.

ಉತ್ತಮ ಶಿಕ್ಷಕರು ಲಭ್ಯವಿರದಿರಬಹುದು

ಉತ್ತಮ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೂ ಸಿಗದಿರುವ ಸಾಧ್ಯತೆಯಿದೆ. ಕೆಲವು ಶಿಕ್ಷಕರು ಉತ್ತಮ ರೀತಿಯಿಂದ ಕೆಲವು ವಿಷಯವನ್ನು ಪಾಠ ಮಾಡುತ್ತಾರೆ.ಆ ಶಿಕ್ಷಕರ ಭಾಗ್ಯ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಆಫ್ ಲೈನ್ ಅಲ್ಲಿ ಸಿಗಬಹುದು.

ಆನ್ಲೈನ್ ಶಿಕ್ಷಣದ ಲಾಭಗಳೇನು?

ಕಡಿಮೆ ಬಂಡವಾಳ

ಲ್ಯಾಬ್ ಬೇಕಾಗುವ ವಿಷಯಗಳಿಗೆ ಮಾತ್ರ ಪ್ರಯೋಗಶಾಲೆ ಇದ್ದರೆ ಸಾಕು. ಕಡಿಮೆ ಬಂಡವಾಳ ಸಾಕು.

ಮನೆಯಿಂದಲೇ ಶಿಕ್ಷಣ

ಹಾವೇರಿಯಲ್ಲೇ ಕುಳಿತು ಹಾರ್ವರ್ಡ್ ಯುನಿವರ್ಸಿಟಿಯ ಕ್ಲಾಸ್ ಅಟೆಂಡ್ ಮಾಡಬಹುದು. ಮನೆಯಿಂದಲೇ ಶಿಕ್ಷಣ ಪಡೆದುಕೊಳ್ಳಬಹುದು. ಪ್ರಯಾಣ ಹಾಗೂ ಉಳಿಯಲು ಜಾಗ ಹುಡುಕುವ ಜಂಜಾಟ ಇಲ್ಲ.

ಟ್ಯೂಷನ್ ಬೇಕಿಲ್ಲ

ಒಮ್ಮೆ ಕಲಿಸಿದ್ದು ಅರ್ಥವಾಗದಿದ್ದರೆ ಎಷ್ಟು ಸಲ ಬೇಕಾದರೂ ಪಾಠ ಕೇಳಿಸಿಕೊಳ್ಳಬಹುದು.

ಉತ್ತಮ ಶಿಕ್ಷಕರು ಲಭ್ಯ

ಒಂದು ಶಿಕ್ಷಕ ಕಲಿಸಿದ್ದು ಅರ್ಥವಾಗದಿದ್ದರೆ ಅದೇ ವಿಷಯದ ಮೇಲೆ ಬೇರೆ ಶಿಕ್ಷಕರ ಪಾಠ ಸಹ ಕೇಳಿಸಿಕೊಳ್ಳಬಹುದು. ಉತ್ತಮ ಶಿಕ್ಷಕ ಕೋಟ್ಯಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬಹುದು. ಉತ್ತಮ ಶಿಕ್ಷಕ ನಗರದಲ್ಲಿರಲಿ ಅಥವಾ ಹಳ್ಳಿಯಲ್ಲಿರಲಿ ಅವರ ಪಾಠ ಎಲ್ಲ ವಿದ್ಯಾರ್ಥಿಗಳಿಗೆ ಸಿಗುವ ಸಾಧ್ಯತೆ ಇದೆ.

ಆನಿಮೇಶನ್/ಡಾಕ್ಯುಮೆಂಟ್ರಿ ಮೂಲಕ ಪ್ರಸ್ತುತಿ

ಆನ್ಲೈನಲ್ಲಿ ಅನಿಮೇಷನ್, ಡಾಕ್ಯುಮೆಂಟರಿ ಮೊದಲಾದ ವಿಡಿಯೋ ಬಳಸಿ ಇನ್ನು ಚೆನ್ನಾಗಿ ಮನದಟ್ಟಾಗುವಂತೆ ಪಾಠ ಕಲಿಸಬಹುದು.

ಆನ್ಲೈನ್ ಶಿಕ್ಷಣದ ನಷ್ಟವೇನು?

ಆನ್ ಲೈನ್ ಶಿಕ್ಷಣ ಎಲ್ಲರಿಗೂ ಆಗದು. ತಂತ್ರಜ್ಞಾನ ಗೊತ್ತಿರುವವರಿಗೆ ಇದು ಸುಲಭ.

ಲ್ಯಾಬೊರೇಟರಿ ಬೇಕಾಗುವ ವಿಷಯಗಳಿಗೆ ಇದೊಂದೆ ಸಾಲದು

ವಿಷಯಕ್ಕೆ ಪ್ರಾಯೋಗಿಕ ಕ್ಲಾಸ್ ಬೇಕಾಗಿದ್ದರೆ ಆಗ ಆನ್ ಲೈನ್ ಒಂದೇ ಸಾಲದು. ವಾಸ್ತವಿಕವಾಗಿ ಪ್ರಯೋಗಶಾಲೆಗೆ ಬೇರೆ ವ್ಯವಸ್ಥೆ ಬೇಕು.

ಮಕ್ಕಳ, ಪಾಲಕರ ಮೇಲೆ ಜವಾಬ್ದಾರಿ ಜಾಸ್ತಿ

ಕಲಿಯಬೇಕು ಎಂಬ ಮನಸ್ಸಿರುವ ಮಕ್ಕಳು ಮಾತ್ರ ಚೆನ್ನಾಗಿ ಕಲಿಯುತ್ತಾರೆ ಇಲ್ಲದಿದ್ದರೆ. ಕಲಿಯದೆ ಇರುವ ಸಾಧ್ಯತೆ ಜಾಸ್ತಿ. ಪಾಲಕರ ಮೇಲೆ ಒತ್ತಡ ಜಾಸ್ತಿ ಆಗಬಹುದು. ಅವರ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ.

ತಂತ್ರಜ್ಞಾನದ ಸಮಸ್ಯೆ

ಇಂಟರ್‌ನೆಟ್ ಹಾಗೂ ಕರೆಂಟ್ ಸಮಸ್ಯೆ ಹಳ್ಳಿಗಳಲ್ಲಿ ಇರಬಹುದು. ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಈಗ ಚೆನ್ನಾಗಿಲ್ಲ. ಲ್ಯಾಪಟಾಪ್ ಹಾಗೂ ಮೀಟಿಂಗ್ ತಂತ್ರಜ್ಞಾನ ಕಲಿಯಲು ಸ್ವಲ್ಪ ಸಮಯ ಬೇಕು.

ತುಂಬಾ ಚಿಕ್ಕ ಮಕ್ಕಳಿಗೆ ಸೂಕ್ತ ಅಲ್ಲ

ತುಂಬಾ ಚಿಕ್ಕ ಮಕ್ಕಳಿಗೆ ಸೂಕ್ತ ಅಲ್ಲ. ಬಹುಶಃ ನಾಲ್ಕನೆಯ ಕ್ಲಾಸಿನ ಮಕ್ಕಳು ಹಾಗೂ ನಂತರದ ಮಕ್ಕಳು ಮಾತ್ರ ಈ ಶಿಕ್ಷಣಕ್ಕೆ ಒಗ್ಗಿಕೊಳ್ಳಬಹುದು.

ಬಡಮಕ್ಕಳಿಗೆ ಕಷ್ಟ

ಬಡವರಿಗೆ ಕಷ್ಟ ಆಗಬಹುದು. ಯಾಕೆಂದರೆ ಉತ್ತಮ ಲ್ಯಾಪ್ಟಾಪ್ ಸ್ಮಾರ್ಟ್ ಫೋನ್ ಖರೀದಿಸಲು ಎಲ್ಲರಿಗೂ ಸಾಧ್ಯವಾಗದು. ಸರಕಾರ ಅಥವಾ ಐಟಿ ಕಂಪನಿಗಳು ಬಡಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಿ ಸಹಾಯ ಮಾಡಬಹುದು.

ಆನ್ಲೈನ್ ಶಿಕ್ಷಣದ ಅವಕಾಶಗಳು

ಇಂದು ಮಾರುಕಟ್ಟೆಯಲ್ಲಿ ಹಲವು ತಾಣಗಳು ಆನ್ಲೈನ್ ಶಿಕ್ಷಣ ಅವಕಾಶ ನೀಡುತ್ತಿವೆ. ನಿಮ್ಮ ಸ್ಮಾರ್ಟ್ ಫೋನಲ್ಲಿ ಅವರ ಆಪ್ ಕೂಡಾ ಡೌನಲೋಡ್ ಮಾಡಬಹುದು.

ಶಾಲಾ ಮಕ್ಕಳಿಗೆ ಕಲಿಯುವ ತಾಣಗಳು

೧ನೇ ತರಗತಿಯಿಂದ ೧೦+೨ ವರೆಗೆ ಗೇಟ್, ಜೆಈಈ ಪರೀಕ್ಷೆ ತಯ್ಯಾರಿಗೆ ಸಹ ಇಲ್ಲಿ ಕ್ಲಾಸ್ ಲಭ್ಯವಿದೆ. ಎನಿಮೇಶನ್ ಮೂಲಕ ಹಲವು ವಿಷಯ ಇನ್ನೂ ಚೆನ್ನಾಗಿ ಅರ್ಥ ಆಗುವಂತೆ ಇದೆ.

https://www.khanacademy.org/ (ಖಾನ್ ಅಕಾಡೆಮಿ)

https://www.vedantu.com/ (ವೇದಾಂತು)

https://byjus.com/ (ಬೈಜುಸ್)

ಎಡ್ ಎಕ್ಸ್ ತಾಣ

ಹಾರ್ವರ್ಡ್, ಎಂಐಟಿ, ಬರ್ಕಲಿ ಮೊದಲಾದ ಯುನಿವರ್ಸಿಟಿಯ ಉಚಿತ ಕೋರ್ಸ್ ಗಳು ಈ ತಾಣದಲ್ಲಿ ಲಭ್ಯವಿದೆ.

https://www.edx.org/

ಉಡೆಮಿ ತಾಣ

ಉಡೆಮಿಯಲ್ಲಿ ನಿಮಗೆ ಉಚಿತ ಹಾಗೂ ಹಣ ನೀಡಿ ಪಡೆಯುವ ಹಲವು ಕೋರ್ಸುಗಳಿವೆ. ಯಾವುದೇ ವಿಷಯದ ಮೇಲೆ ನುರಿತ ತಜ್ಞರ ಕ್ಲಾಸ್ ಇಲ್ಲಿ ಪಡೆಯಬಹುದು.

https://www.udemy.com/

ಸ್ಕಿಲ್ ಶೇರ್ / ಲಿಂಕಡ್ ಇನ್ ಲರ್ನಿಂಗ್ / ಕೋರ್ಸೆರಾ ತಾಣಗಳು

ಸ್ಕಿಲ್ ಶೇರ್ / ಲಿಂಕ್ಡ್ ಇನ್ ಲರ್ನಿಂಗ್ / ಕೋರ್ಸೆರಾ ತಾಣಗಳು ಸಹ ಆನ್ ಲೈನ್ ಶಿಕ್ಷಣಕ್ಕೆ ಉತ್ತಮ ಆಯ್ಕೆಗಳು.

https://www.skillshare.com/

https://www.linkedin.com/learning

https://www.coursera.org/

ಯೂಟ್ಯೂಬ್ ತಾಣ

ನಮ್ಮಲ್ಲಿ ಯೂಟ್ಯೂಬ್ ಅನ್ನು ಜಾಸ್ತಿ ಹಾಡು, ತಮಾಷೆ ನೋಡಲು ಬಳಸುತ್ತೇವೆ. ಆದರೆ ಯೂಟ್ಯೂಬ್ ನಲ್ಲಿ ಹಲವು ವಿಷಯದ ಬಗ್ಗೆ ಮಾಹಿತಿ, ಡಿಮೋ, ವಿಧಾನದ ಬಗ್ಗೆ ವಿಡಿಯೋ ಗಳಿವೆ. ಅವನ್ನೂ ಸಹ ಕಲಿಕೆ ಗೆ ಬಳಸ ಬಹುದು.

ಆನಲೈನ್ ಶಿಕ್ಷಣದಲ್ಲಿ ಕನ್ನಡದ ಹಿನ್ನಡೆ

ಇಂದು ಹಲವು ಆನಲೈನ್ ಶಿಕ್ಷಣದ ಅವಕಾಶ ಇದ್ದರೂ ಕನ್ನಡದಲ್ಲಿ ಯಾವುದೂ ಇಲ್ಲ. ಇದಕ್ಕೆ ಕಾರಣ ಹೆಚ್ಚಿನ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದವು. ಕನ್ನಡದಲ್ಲಿ ಶಿಕ್ಷಣದ ಭವಿಷ್ಯ ಕೂಡಾ ಮಂಕಾಗಿರುವದು. ಸರಕಾರಿ ಶಾಲೆಗಳು ಸೇರಿದಂತೆ ಖಾಸಗಿಯಲ್ಲೂ ಆಂಗ್ಲ ಮಾಧ್ಯಮದ ಕಡೆಗೆ ಒಲವಿದೆ. ಇನ್ನು ಮುಂದೆ ಕೂಡಾ ಕನ್ನಡದ ಪ್ರಯತ್ನ ನಡೆಯುವದಾ ಕಾದು ನೋಡ ಬೇಕು.

ಆನಲೈನ್ ಶಿಕ್ಷಣದ ಭವಿಷ್ಯ?

ಆನಲೈನ್ ಶಿಕ್ಷಣ ಕಾಲಕ್ರಮೇಣ ಹೆಚ್ಚಾಗಲಿದೆ. ಮಕ್ಕಳು, ವಿದ್ಯಾರ್ಥಿಗಳು, ವೃತ್ತಿಪರರು ಇನ್ನೂ ಚೆನ್ನಾಗಿ ವಿಷಯ ಕಲಿಯಲು ಸಹಾಯಕವಾಗಲಿದೆ.

ಇಂದು ಮಾಹಿತಿ ನಮ್ಮ ಕೈಯಲ್ಲಿ ಇದೆ. ಅದನ್ನು ನೋಡಿ, ಓದಿ, ಕಲಿತು ಸಾಧನೆ ಮಾಡುವದು ನಮ್ಮ ಕೈಯಲ್ಲಿದೆ.

ಯಾವುದೋ ಕೆಲಸಕ್ಕೆ ಬಾರದ ಮಳ್ಳು ವೇಷದ ವಿಡಿಯೋ ನೋಡಿ ಸಮಯ ಹಾಳು ಮಾಡುವದಕ್ಕಿಂತ್ ಇಂತಹ ತಾಣದಲ್ಲಿ ಕಲಿತು ಬಳಸಿ ಸಾಧನೆ ಮಾಡುವದು ಸಾವಿರ ಪಟ್ಟು ಮೇಲು.

ಇಂದು ಮಕ್ಕಳು ಆನಲೈನ್ ಶಿಕ್ಷಣ ಪಡೆಯುವದರಿಂದ ಅವರಿಗೆ ಲಾಭವಿದೆ. ಆಫ್ ಲೈನ್ ಶಿಕ್ಷಣದ ಜೊತೆಗೆ ಇದನ್ನು ಬಳಸುವದರಿಂದ ವಿದ್ಯಾರ್ಥಿಗಳು ಅರ್ಥವಾಗದ ವಿಷಯಗಳನ್ನು ಮತ್ತೊಮ್ಮೆ ನೋಡಿ ಮನದಟ್ಟು ಮಾಡಿಕೊಳ್ಳಬಹುದು. ಟ್ಯೂಷನ್ ಅವಶ್ಯಕತೆಯನ್ನು ಇದು ಕಡಿಮೆ ಮಾಡುತ್ತದೆ.

ಇಂದು ನಗರದಲ್ಲಿ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮಕ್ಕಳ ಡೊನೇಶನ್ ಖಾಸಗಿ ಶಾಲೆಗಳಲ್ಲಿ ಲಕ್ಷ ದಾಟುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಹೇಗಿದೆ ಎಂದರೆ ಹಲವು ದಶ ಲಕ್ಷ ಕೊಟ್ಟು ಕಲಿತು ಬರುವ ವೈದ್ಯರು ಜನರ ರೋಗಕ್ಕೆ ಎಷ್ಟು ಬೇಕೋ ಅಷ್ಟು ಚಿಕಿತ್ಸೆ ಕೊಡುವ ಬದಲು ತಮ್ಮ ಕಲಿಕೆಯ ಖರ್ಚು ವಾಪಸ್ ಪಡೆಯಲು ಹಣ ಮಾಡುವ ದಾರಿಗೆ ಇಳಿಯುವ ಸಾಧ್ಯತೆಯಿದೆ. ಹೀಗಾಗದಿರಲು ವೈದ್ಯಕೀಯ ಶಿಕ್ಷಣದ ವೆಚ್ಚ ಇಳಿಯಬೇಕು.

ಅನಿವಾರ್ಯ ಕಾರಣದಿಂದ ವಿದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗಲಾಗದವರು ಇಲ್ಲಿಯೇ ಕುಳಿತು ಹೆಚ್ಚಿನ ವಿಷಯ ತಿಳಿಯಬಹುದು. ಗ್ರಾಮದ ವಿದ್ಯಾರ್ಥಿಗಳೂ ನಗರ ವಾಸಿಗಳ ಮಟ್ಟಕ್ಕೆ ಮಾಹಿತಿಯನ್ನು ಪಡೆಯಬಹುದು.

ಒಟ್ಟಿನಲ್ಲಿ ಆನ್ ಲೈನ್ ಶಿಕ್ಷಣ ನಮ್ಮ ಶಿಕ್ಷಣವನ್ನು ಬದಲಾಯಿಸಲಿದೆ. ಕರೋನಾ ಮಾರಿಯ ನಂತರ ಇದರ ಬಗ್ಗೆ ಅರಿವು ಜಾಸ್ತಿಯಾಗಿದೆ. ಶಿಕ್ಷಣದ ಖರ್ಚನ್ನು ಇಳಿಸಲು ಇದು ಸಹಾಯಕ.

ನಿಮ್ಮ ಅನಿಸಿಕೆ ಏನು? ಕಮೆಂಟ್ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.