ಆಗಷ್ಟ್ 23, 2020

ಕೊರೊನಾ ಸಮಯದಲ್ಲಿ ಕಣ್ಮರೆಯಾದ ಕನ್ನಡ

ಸ್ನೇಹಿತರಿಗೆ ಹಂಚಿಕೊಳ್ಳಿ

ಒಂದು ಭಾಷೆಯ ಮಹತ್ವ ಹೆಚ್ಚಾಗುವುದು ಅದರ ಬಳಕೆ ಜಾಸ್ತಿ ಆದಾಗ. ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ದಿನಬಳಕೆಗೆ, ಪ್ರಜೆಗಳ ಅಗತ್ಯಗಳಿಗೆ ಸರಕಾರ ನಡೆಸಲು ಹಾಗೂ ವಿಪತ್ತು ನಿರ್ವಹಣೆಗೆ ಬಳಸಿದರೆ ಅದರ ಘನತೆ ಹೆಚ್ಚುತ್ತದೆ. ಇತ್ತೀಚಿಗೆ ಮನುಕುಲಕ್ಕೆ ಬಂದ ಆಪತ್ತು ಗಳಲ್ಲಿ ಕೊರೊನಾ ಅಲಿಯಾಸ್ ಕೋವಿಡ್-19 ಒಂದು.

ಕನ್ನಡ ನಾಡಿನಲ್ಲಿ ಇದರ ನಿರ್ವಹಣೆಗಾಗಿ ಹೆಚ್ಚು ಬಳಸುವ ಭಾಷೆ ಯಾವುದು? ಕನ್ನಡ? ಅಲ್ಲ!!

ಇಂದು ಬಿಬಿಎಂಪಿ ವಾರ್ ರೂಂ ರಿಪೋರ್ಟ್ ಹೀಗೆ ಹತ್ತು ಹಲವು ವಿಷಯಗಳು ಆಂಗ್ಲ ಭಾಷೆಯಲ್ಲಿವೆ.ಇವೆಲ್ಲವನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾಡಿದ್ದರೆ ಬಿಎಯಂತಹ ಕನ್ನಡ ಡಿಗ್ರಿ ಗೆ ಬೆಲೆ ಬರುತ್ತಿತ್ತು. ಆಸ್ಪತ್ರೆಯಲ್ಲಿ ಬಿಡಿ ವೈದ್ಯಕೀಯ ಶಿಕ್ಷಣ ಆಂಗ್ಲ ಭಾಷೆಯಲ್ಲಿ ಇರುವುದರಿಂದ ಕನ್ನಡ ಅಲ್ಲಿ ಕನಸು.

ಆದರೆ ಕಂಟೇನ್ ಮೆಂಟ್ ಜೋನ್ ಎಚ್ಚರಿಕೆ ಅಥವಾ ವ್ಯಾನ್ ಮೇಲೇ ಕೂಡಾ ಕನ್ನಡಕ್ಕೆ ಜಾಗ ಇಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನು ಕನ್ನಡದಲ್ಲಿ ಬರೆದು ಉಪಯುಕ್ತ ಮಾಹಿತಿಯನ್ನು ಇಂಗ್ಲಿಷ್ ಅಲ್ಲೇ ಬರೆಯುವ ಚಾಳಿ ಅನೇಕ ಕಡೆಗಳಲ್ಲಿ ಕಾಣಿಸುತ್ತದೆ.

ಕನ್ನಡ ಭಾಷೆಯಲ್ಲಿ ಉಪಯುಕ್ತ ಮಾಹಿತಿಯನ್ನು ಕೊಡದಿದ್ದಲ್ಲಿ ಶಿಕ್ಷಣದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಯಾಕೆ ಕನ್ನಡ ಕಲಿಯಲು ಆಸಕ್ತಿ ವಹಿಸುತ್ತಾರೆ?

ಇನ್ನೂ ಸ್ವಲ್ಪ ದಶಕ ಕಳೆದರೆ ಕನ್ನಡಿಗನೇ ಕನ್ನಡದ ಬೋರ್ಡ್ ಓದಲಾರ. ಯಾಕೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ. ಇಂದು ದಿನಬಳಕೆಯ ಲಕ್ಷಾಂತರ ವಸ್ತುಗಳ ಮೇಲೆ ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮ ಭಾಷೆ!!ರೋಡ್ ರಿಪೇರಿ ಇರಲಿ ಅಥವಾ ಇನ್ನೂ ಹಲವು ಸಂದರ್ಭಗಳಲ್ಲಿ ಕನ್ನಡ ಬಳಕೆ ಶೂನ್ಯ.

ನಮ್ಮಲ್ಲಿ ಹಿಂದಿ ದ್ವೇಷಿಗಳಿದ್ದಾರೆ. ಸಂಸ್ಕೃತ ದ್ವೇಷಿಗಳಿದ್ದಾರೆ. ಕನ್ನಡದಲ್ಲಿ ಯಾರೂ ಬಳಸಲಾಗದ ಪರ್ಯಾಯ ಪದ ಹುಡುಕುವವರು ಇದ್ದಾರೆ. ಆದರೆ ಕನ್ನಡವನ್ನು ಬಳಸಿ ಭಾಷೆಯ ಪ್ರಸ್ತುತತೆ ಹೆಚ್ಚಿಸಬಹುದಾಗಿದ್ದ ಇಂತಹ ಅವಕಾಶವನ್ನು ಕೈ ಚೆಲ್ಲುತ್ತಿದ್ದೇವೆ.

ಇಂದು ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಮಾತ್ರ ಕಲಿಯುತ್ತಿದ್ದಾರೆ. ಕೆಲವು ಕಡೆ ಇಂಗ್ಲಿಷ್ ಅನಿವಾರ್ಯ. ಬರೀ ಕನ್ನಡ ಬಳಸಿದರೂ ನಡೆಯುವ ಕಡೆ ಇಂಗ್ಲಿಷ್ ಬಳಸಿ ಕನ್ನಡ ತುಳಿಯುತ್ತಿರುವದು ಯಾಕೆ? ಇದೇ ಜಾಗದಲ್ಲಿ ಹಿಂದಿ ಬಳಸಿದ್ದರೆ ಎಗರಾಡುವ ಜನರಲ್ಲಿ ಕನ್ನಡ ಪ್ರೇಮ ಕಿಂಚಿತ್ ಇದೆಯಾ ಅನ್ನುವುದು ಯಕ್ಷ ಪ್ರಶ್ನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.