ಸೆಪ್ಟೆಂಬರ್ 4, 2020

ಕನ್ನಡ ಭಾಷೆ ಬೆಳೆಯೋಕೆ ಏನೇನು ಮಾಡಬೇಕು?

ಸ್ನೇಹಿತರಿಗೆ ಹಂಚಿಕೊಳ್ಳಿ

ಈ ಪ್ರಶ್ನೆಗೆ ಉತ್ತರವೇನು?  ಸರಕಾರ ಕನ್ನಡದ ಉದ್ಧಾರಕ್ಕೆ ಕೋಟಿಗಟ್ಟಲೆ ಹಣ ಸುರಿಯಬೇಕೆ? ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂಬ ಸನ್ಮಾನ ಸಿಗಬೇಕೆ? ಹೀಗೇನಾದರೂ ಹೇಳುತ್ತಿದ್ದರೆ ಒಂದೇ ನೀವು ಸ್ವಾರ್ಥ ರಾಜಕಾರಣಿ ಆಗಿರಬೇಕು ಅಥವಾ ಇಂಕೇ ಇಲ್ಲದ ಲೇಖನಿ ಹಿಡಿದ ಪ್ರಚಾರದ ಗೀಳಿರುವ ಸಾಹಿತಿ ಆಗಿರಬೇಕು. ಆದರೆ ಕನ್ನಡದ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಂತೂ ಖಂಡಿತ ಸಾಧ್ಯವಿಲ್ಲ.
ಈ ಸ್ವಾರ್ಥ ರಾಜಕೀಯ ಅಥವಾ ಪ್ರಚಾರದ ಗೀಳು ಇವನ್ನೆಲ್ಲ ಬಿಟ್ಟು ಯೋಚಿಸಿದಾಗ ಬರುವದು ಹಲವು ಸಾಧ್ಯತೆಗಳು.ಇದಕ್ಕೆ ಯಾವ ಸರಕಾರದ ಕೃಪಾಕಟಾಕ್ಷ ಸಹ ಬೇಕಾಗಿಲ್ಲ. ಜನಸಾಮಾನ್ಯರಾದ ನಾವು ನಮ್ಮ ಯೋಚನಾ ಲಹರಿ ಚೇಂಜ್ ಮಾಡ್ಕೋಬೇಕು ಅಷ್ಟೇ. ಬನ್ನಿ ನೋಡೋಣ ಕನ್ನಡ ಬೆಳೆಸೋದು ಹೇಗೆ ಅಂತಾ.

ಆಮಂತ್ರಣ ಪತ್ರಿಕೆ ಕನ್ನಡದಲ್ಲೇ ಇರಲಿ. ಅನಿವಾರ್ಯ ಎನ್ನಿಸಿದಾಗ ಮಾತ್ರ ಇಂಗ್ಲೀಷ್ ನಲ್ಲಿ ಒಂದು ಪುಟದಲ್ಲಿ ವಿವರ ಹಾಕಿ.

ನಿಮ್ಮ ಅಥವಾ ನಿಮ್ಮ ಮಕ್ಕಳ ಮದುವೆ, ಉಪಯನ ಅಥವಾ ಗೃಹಪ್ರವೇಶ ಆಮಂತ್ರಣ ಪತ್ರಿಕೆಯೇ ಇರಬಹುದು. ಕನ್ನಡದಲ್ಲೇ ಅಚ್ಚು ಹಾಕಿಸಿರಿ.ಅಕಸ್ಮಾತ್ ಕನ್ನಡ ತಿಳಿಯದ ಗೆಳೆಯರಿದ್ದರೆ ಒಂದು ಪುಟದಲ್ಲಿ ಮುಖ್ಯವಿವರಗಳನ್ನು ಮಾತ್ರ ಇಂಗ್ಲೀಷ್ ನಲ್ಲಿ ಬರೆಯಿರಿ.
ಲಾಭ: ಕನ್ನಡ ಪ್ರಿಂಟಿಂಗ್ ಗೆ ಮಹತ್ವ ಹೆಚ್ಚುತ್ತದೆ.ಪ್ರಿಂಟಿಂಗ್ ಉದ್ಯಮದಲ್ಲಿರುವವರು ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಆಮಂತ್ರಣ ಪತ್ರಿಕೆ ಓದುವ ಕನ್ನಡಿಗರಿಗೂ ಹೆಮ್ಮೆಯಾಗುತ್ತದೆ. ಅವರೂ ಸಹ ಆಮಂತ್ರಣ ಪತ್ರಿಕೆ ಕನ್ನಡದಲ್ಲಿ ಛಾಪಿಸುವದಕ್ಕೆ ಇದು ಸ್ಪೂರ್ತಿಯಾಗಬಹುದು.

ಬ್ಯಾಂಕ್ ಎಟಿಎಂ ಅಲ್ಲಿ ಕನ್ನಡ ಮೆನು ಬಳಸಿ

ಕೆನರಾ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಎಟಿಎಂ ಕನ್ನಡದಲ್ಲಿದೆ.ಅಲ್ಲಿ ಕನ್ನಡ ಬಳಸಿ. ನಿಮ್ಮ ಬ್ಯಾಂಕ್ ಎಟಿಎಂ ಅಲ್ಲಿ ಕನ್ನಡ ಇಲ್ಲದಿದ್ದರೆ ದೂರು ಕೊಡಿ. ಎಟಿಎಂ ಕನ್ನಡದಲ್ಲಿ ಇಲ್ಲ ಎಂದು ಹೀಗೆ ಅನೇಕ ದೂರು ಬಂದಾಗ ಖಂಡಿತ ಬ್ಯಾಂಕ್ ಗಳು ಕನ್ನಡ ಇಂಟರ್ ಫೇಸ್ ಮಾಡಲು ಹಣ ವ್ಯಯಿಸುತ್ತದೆ.
ಲಾಭ: ಕನ್ನಡ ಮಾತ್ರ ಬಲ್ಲವರಿಗೆ ಕನ್ನಡದ ಬಗ್ಗೆ ಕೀಳರಿಮೆ ಹೋಗುತ್ತದೆ. ಎಟಿಎಂ ಬಳಸಲು ಇಂಗ್ಲೀಷ್ ಬರಲೇ ಬೇಕು ಎಂಬ ಅನಿವಾರ್ಯತೆ ಇಲ್ಲವಾಗುತ್ತದೆ. ಆಧುನಿಕ ಸೌಲಭ್ಯಗಳಲ್ಲಿ ಕನ್ನಡ ಬಳಕೆ ಹೆಚ್ಚಿದಂತೆ ಅದು ಹೆಚ್ಚು ಪ್ರಸ್ತುತವಾಗುತ್ತದೆ.

ಯಾವುದಾದರೂ ಒಂದು ಕನ್ನಡ ದಿನಪತ್ರಿಕೆ ತರಿಸಿ ಓದಿ.

ಇಂದು ಇಂಗ್ಲೀಷ್ ಪತ್ರಿಕೆ ಓದುವದು ಪ್ರತಿಷ್ಟೆಯ ವಿಷಯ. ಓದಿ ಪರವಾಗಿಲ್ಲ ಆದರೆ ಕನ್ನಡ ದಿನಪತ್ರಿಕೆ ಸಹ ಓದಿ. ಹೆಚ್ಚು ಜನ ಕನ್ನಡ ಪತ್ರಿಕೆ ಓದಿದಾಗ ಕನ್ನಡ ದಿನಪತ್ರಿಕೆಗಳ ಜಾಹೀರಾತಿನ ಮೌಲ್ಯ ಹೆಚ್ಚಿ ಅವುಗಳಿಗೆ ಲಾಭ ಹೆಚ್ಚುತ್ತದೆ. ನಿಮಗೂ ಸಹ ಕನ್ನಡ ವೇಗವಾಗಿ ಓದುವ ರೂಡಿ ಹೆಚ್ಚುತ್ತದೆ. ನಿಮ್ಮ ಶಬ್ದ ಭಂಡಾರ ಸಹ ಬೆಳೆಯುತ್ತದೆ.

ಒಂದು ಉತ್ತಮ ಕನ್ನಡ ಸಿನಿಮಾ ಬಂದಾಗ ನೋಡಿ ಪ್ರೋತ್ಸಾಹಿಸಿ

ಒಳ್ಳೆಯ ಕನ್ನಡ ಚಿತ್ರ ಬಂದಾಗ ನೋಡಿ ಆನಂದಿಸಿ.
ಲಾಭ: ಕನ್ನಡ ಚಿತ್ರಗಳ ಮಾರುಕಟ್ಟೆ ಹೆಚ್ಚಿ ಇನ್ನೂ ದೊಡ್ಡ ಬಜೆಟ್ ನ ಚಿತ್ರ ಬರುತ್ತದೆ.

ನಿಮ್ಮ ವಿಸಿಟಿಂಗ್ ಕಾರ್ಡ್ ಕನ್ನಡದಲ್ಲಿ ಇರಲಿ.

ಕನ್ನಡದಲ್ಲಿ ವಿಸಿಟಿಂಗ್ ಕಾರ್ಡ್ ಮಾಡಿಸಿ. ಬೇಕಿದ್ದರೆ ಒಂದು ಕಡೆ ಕನ್ನಡದಲ್ಲಿ ಇನ್ನೊಂದು ಕಡೆ ಇಂಗ್ಲೀಷ್ ನಲ್ಲಿ ಮಾಡಿಸಿ.
ಲಾಭ: ಕನ್ನಡ ಭಾಷೆಯ ಪ್ರಸ್ತುತತೆ ಹೆಚ್ಚುತ್ತದೆ. ಕನ್ನಡ ಪ್ರಿಂಟಿಂಗ್ ಗೆ ಬೇಡಿಕೆ ಹೆಚ್ಚಿ ಕನ್ನಡ ಗೊತ್ತಿರುವವರೇ ಪ್ರಿಂಟಿಂಗ್ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ಮದುವೆಯ ಕಲ್ಯಾಣ ಮಂಟಪದಲ್ಲಿ ಕನ್ನಡ ಬಳಸಿ

ನಿಮ್ಮ ಮದುವೆಯ ಸ್ವಾಗತ ತೋರಣ, ಕಾರು, ಬಸ್ಸಿಗೆ ಹಾಕಿದ ವಧು ವರರ ಹೆಸರು ಕನ್ನಡದಲ್ಲೇ ಇರಲಿ.
ಲಾಭ: ಕನ್ನಡ ಭಾಷೆಯ ಪ್ರಸ್ತುತತೆ ಹೆಚ್ಚುತ್ತದೆ. ಮದುವೆಯ ಡೆಕೋರೇಟರ್ ಗೆ ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ.

ನಿಮ್ಮ ಅಂಗಡಿಯ ಅಥವಾ ಹೋಟೆಲ್ ನ ಬೋರ್ಡ್, ಮೆನು, ಬಿಲ್ ಎಲ್ಲದರಲ್ಲೂ ಕನ್ನಡವೇ ಮುಖ್ಯ ಭಾಷೆಯಾಗಿರಲಿ.

ನಿಮ್ಮ ಅಂಗಡಿಯ ಬೋರ್ಡ್  ಕನ್ನಡದಲ್ಲೇ ಇರಲಿ. ಕನ್ನಡ ತಿಳಿಯದ ಗಾಂಪರಿಗೆ ಸಾದಾ ರೀತಿಯಲ್ಲಿ ಇಂಗ್ಲೀಷ್ ನಲ್ಲಿ ಬರೆಯಿಸಿ.
ಮೆನು ನಲ್ಲಿ ಕನ್ನಡ ಇರಲಿ.
ಲಾಭ: ಕನ್ನಡ ಭಾಷೆಯ ಪ್ರಸ್ತುತತೆ ಹಾಗೂ ಮಹತ್ವ ಹೆಚ್ಚುತ್ತದೆ. ಬೋರ್ಡ್ ತಯಾರಕರಿಗೆ ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ.

ನೀವು ಜಮೀನಿನ ಕಾಗದಪತ್ರ, ಬಾಡಿಗೆ ಕರಾರು ಇತ್ಯಾದಿಗಳು ಕನ್ನಡದಲ್ಲೇ ಇರಬೇಕೆಂದು ಒತ್ತಾಯಿಸಿ.

ಜಮೀನು ಕ್ರಯ ಪತ್ರ (ಸೇಲ್ ಡೀಡ್), ಬಾಡಿಗೆ ಕರಾರು (ರೆಂಟ್ ಎಗ್ರಿಮೆಂಟ್) ಇತ್ಯಾದಿ ಕನ್ನಡದಲ್ಲೇ ಇರಬೇಕು ಎಂದು ಮಾಲೀಕರಿಗೆ, ಲಾಯರಿಗೆ ಹಾಗೂ ಬ್ರೋಕರಿಗೆ ಹೇಳಿ.
ಲಾಭ:ಕನ್ನಡ ಭಾಷೆಯ ಪ್ರಸ್ತುತತೆ ಹಾಗೂ ಮಹತ್ವ ಹೆಚ್ಚುತ್ತದೆ. ಕಾನೂನು, ವ್ಯಾಪಾರಗಳಲ್ಲಿ ಕನ್ನಡ ಬಳಕೆ ಹೆಚ್ಚುತ್ತದೆ.

ಕನ್ನಡ ತಾಣಗಳನ್ನು ನೋಡಿ ಪ್ರೋತ್ಸಾಹಿಸಿ

ಹತ್ತು ಹಲವು ಕನ್ನಡ ವೆಬ್ ಸೈಟುಗಳಿವೆ. ಅವುಗಳನ್ನು ಭೇಟಿ ಕೊಟ್ಟು ಪ್ರೋತ್ಸಾಹಿಸಿ. ಹೆಚ್ಚಿನ ಓದುಗರು ಭೇಟಿ ಕೊಟ್ಟು ಪ್ರೋತ್ಸಾಹ ನೀಡಿದರೆ ತಾಣಗಳಿಗೆ ಸ್ಪೂರ್ತಿ ಸಿಗುತ್ತದೆ.
ಲಾಭ: ಇನ್ನೂ ಹೆಚ್ಚು ಸೌಲಭ್ಯ ಕನ್ನಡದಲ್ಲಿ ಬರುತ್ತದೆ. ಜಾಹಿರಾತು ಹರಿದು ತಾಣ ಬೆಳೆಯಲು ಸಹಾಯಕವಾಗುತ್ತದೆ.

ಬೇರೆ ಭಾಷಿಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವಾಗ ನಿಂದಿಸಬೇಡಿ

ಹೆಚ್ಚಿನ ಬೇರೆ ಭಾಷಿಕರು ಕರ್ನಾಟಕಕ್ಕೆ ಬಂದಾಗ ಕನ್ನಡ ಕಲಿಯಲು ಆಸಕ್ತಿ ಹೊಂದಿರುತ್ತಾರೆ. ಅದಕ್ಕೆ ಸೂಕ್ತ ಅವಕಾಶ ಸಿಗಬೇಕು ಅಷ್ಟೇ. ಅವರು ಮಾತನಾಡುವಾಗ ಅವರ ಮಾತೃಭಾಷೆ ಹಿಂದಿ, ತಮಿಳು, ತೆಲುಗು ಪ್ರಭಾವ ಇರುವದು ಅತ್ಯಂತ ಸಹಜ. ಹಾಗಂತ “ನಮ್ಮ ಕನ್ನಡ ಹಾಳು ಮಾಡಬೇಡ” , “ನೀನು ಇಂಗ್ಲೀಷ್ ಹಿಂದೀಲೇ ಮಾತಾಡು” ಎಂದು ಹೇಳುವದು ಶತ ಮೂರ್ಖತನ. ತಪ್ಪಿದಾಗ ತಿದ್ದಲು ಪ್ರಯತ್ನಿಸಿ. ಒಂದೆರಡು ತಪ್ಪಾದ ಮಾತ್ರಕ್ಕೆ ಇಡೀ ಭಾಷೆಯನ್ನು ಕಲಿಯಬಾರದು ಎಂದು ಹೇಳುವದು ಮುಟ್ಠಾಳತನ.

ಕೆಲವರು ಹಾಗೆ ನೋಡಿದರೆ ಇಂಗ್ಲೀಷನ್ನೆ ತಪ್ಪು ತಪ್ಪಾಗಿ ಮಾತನಾಡುತ್ತಾರೆ. ಹಾಗಂತ ಬಿಟ್ಟು ಬಿಡುತ್ತಾರೆಯೇ? ಅದಕ್ಕೆ ಇಂಗ್ಲೀಷ್ ಇಂದು ಜಾತಿ ಮತ, ಭಾಷೆ ಭೇದ ಮೀರಿ ಬೆಳೆದು ನಿಂತಿರುವದು.
ಲಾಭ: ಕನ್ನಡ ಇನ್ನಷ್ಟು ಬೆಳೆಯುತ್ತದೆ. ಹೆಚ್ಚಿನ ಜನ ಕಲಿಯುತ್ತಾರೆ.

ಅತಿ ಶುದ್ಧ ಕನ್ನಡ ಭಾಷೆ ಬಳಸುವ ಹುಚ್ಚು ಹಠ ಬಿಟ್ಟು ಬಿಡಿ

ಒಂದು ಭಾಷೆಯ ಮೂಲ ಉದ್ದೇಶ ಏನೆಂದರೆ ವಿಚಾರಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಅರ್ಥವಾಗುವಂತೆ ಹೇಳುವದೇ  ಹೊರತು ಹತ್ತು ಡಿಕ್ಶನರಿ ಪಕ್ಕದಲ್ಲಿಟ್ಟು ಕೊಂಡು ಇಪ್ಪತ್ತು ಸಲ ಓದಿದರೂ ಅರ್ಥವಾಗದ ಕ್ಲಿಷ್ಟ ಸಾಲುಗಳನ್ನು ಬರೆದು ಬಹುಮಾನ ಗಿಟ್ಟಿಸಿಕೊಳ್ಳುವದಲ್ಲ.
ಬಳಸಿದ ಹಾಗೆ ಬೆಳೆಯುವದು ಈ ಭಾಷೆ. ಹೊಸ ಹೊಸ ವಿಚಾರಗಳನ್ನು, ಪದಗಳನ್ನು ವಿವಿದ ಭಾಷೆಗಳಿಂದ ಪಡೆದು ತನ್ನಲ್ಲಿ ಸೇರಿಸಿ ಕೊಳ್ಳುತ್ತಾ ಬೆಳೆಯುವದು ಒಳ್ಳೆಯ ಲಕ್ಷಣ. ಭಾಷೆ ಎಂಬುದು ಹರಿಯುವ ನೀರಿದ್ದಂತೆ. ಕಾಲ ಕಳೆದಂತೆ ಅನೇಕ ಪದಗಳು ವಾಡಿಕೆಯಿಂದಲೇ ಮರೆಯಾಗುತ್ತವೆ. ಅಥವಾ ಅರ್ಥ ಬದಲಾಯಿಸಿಕೊಳ್ಳುತ್ತದೆ. ಇದು ಜೀವಂತ ಭಾಷೆಯ ಲಕ್ಷಣ. ನಿರ್ಜೀವ ಭಾಷೆ ಮಾತ್ರ ಈ ರೀತಿಯ ಯಾವುದೇ ಬದಲಾವಣೆ ಆಗದೇ ಇರಬಲ್ಲುದು.
ಕನ್ನಡ ಭಾಷೆ ಜೀವಂತ ಭಾಷೆಯಾಗಿರಲಿ. ಸಂಸ್ಕೃತ ಭಾಷೆಗೆ ಮೂರ್ಖ ಪಂಡಿತರು ಹಾಕಿದ ಕಟ್ಟುಪಾಡುಗಳು ಕನ್ನಡಕ್ಕೆ ಬೇಡ.
ಕನ್ನಡದಲ್ಲಿ ಆಡುಮಾತಲ್ಲಿರುವ ಪದಗಳನ್ನು ಲೇಖನಗಳಲ್ಲಿ ದಾರಾಳವಾಗಿ ಬಳಸಿ. ಅದಕ್ಕೆ ಮಡಿವಂತಿಕೆ ಬೇಡವೇ ಬೇಡ.

ನಿಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿ

ಮನೆಯಲ್ಲಿ ಕನ್ನಡವನ್ನೇ ಮಾತನಾಡಿ. ನಿಮ್ಮ ವೈವಿಧ್ಯಮಯ ಮನೆ ಮಾತಿನ ಸೊಗಡನ್ನು ಉಳಿಸಿಕೊಳ್ಳಿ. ಅದು ಮಂಡ್ಯ ಕನ್ನಡವೇ ಆಗಿರಬಹುದು. ಅಥವಾ ಹವ್ಯಕ ಕನ್ನಡವೇ ಆಗಿರಬಹುದು. ಉತ್ತರ ಕರ್ನಾಟಕದ ಜಾವರಿ ಶೈಲಿಯ ಕನ್ನಡವೇ ಆಗಿರಬಹುದು.
ನೆನಪಿಡಿ ಇಂದಿನ ಮಕ್ಕಳೇ ನಾಳಿನ ಯುವಕರು. ಮಕ್ಕಳು ಕಲಿತಾಗಲೇ ಮುಂದಿನ ಪೀಳಿಗೆಗೆ ಆ ವಿಶೇಷ ಕನ್ನಡ ಇರಲು ಸಾಧ್ಯ.

ಕನ್ನಡ

ಮನೆಯ ಕಲ್ಲಿನ ಮೇಲೆ ಕನ್ನಡದಲ್ಲೇ ಹೆಸರು ಬರೆಯಿಸಿರಿ.

ನಿಮ್ಮ ಮನೆಯ ಹೆಸರನ್ನು ಹಾಗೂ ನಿಮ್ಮ ಹೆಸರನ್ನು ಕನ್ನಡದಲ್ಲೇ ಬರೆಯಿಸಿ.

ಕನ್ನಡದಲ್ಲಿ ಕವನ, ಲೇಖನಗಳನ್ನು ಬರೆಯಿರಿ. ಚರ್ಚೆ ನಡೆಸಿ.

ನೀವು ಬರಹಗಾರರಾಗಿದ್ದರೆ ನಿಮ್ಮ ಅನುಭವ, ಅನಿಸಿಕೆ ಕನ್ನಡದಲ್ಲೇ ಬರೆಯಿರಿ. ಹೆಚ್ಚು ಹೆಚ್ಚು ವಿಚಾರಗಳು ಕನ್ನಡದಲ್ಲಿ ಬರೆದಂತೆ ಕನ್ನಡ ಭಾಷೆಯ ಜ್ಞಾನ ಪರಿಧಿ ಹೆಚ್ಚುತ್ತದೆ. ಕನ್ನಡ ಭಾಷೆಯ ಮಹತ್ವ ಹಾಗೂ ಪ್ರಸ್ತುತತೆ ಹೆಚ್ಚುತ್ತದೆ.

ಕನ್ನಡವನ್ನು ಇಂಗ್ಲೀಷ್ ಗಿಂತ ಕೀಳು ಎಂದಾಗಲೀ ಅಥವಾ ದಡ್ಡರ ಭಾಷೆ ಎಂದಾಗಲಿ ಅಥವಾ ಇಂಗ್ಲೀಷ್ ತಿಳಿಯದವನು ದಡ್ಡ ಎಂದಾಗಲಿ ಬಿಂಬಿಸಬೇಡಿ.

ಕನ್ನಡ ಯಾವುದೇ ಭಾಷೆಗೂ ಕಮ್ಮಿ ಏನಲ್ಲ. ನಮ್ಮ ಮೈಂಡ್ ಸೆಟ್ ಬದಲಾಗಬೇಕು ಅಷ್ಟೇ. ಒಂದು ಸುಳ್ಳನ್ನು ಸಾವಿರಬಾರಿ ಹೇಳಿದರೆ ಅದು ನಿಜವೇ ಆಗಿ ಬಿಡಬಹುದು. ನಿಮ್ಮ ಕೀಳರಿಮೆ ಬಿಡಿ. ತಮಾಷೆಗೂ ಕೂಡ ಕನ್ನಡವನ್ನು ನಿಂದಿಸಬೇಡಿ.

ನಿಮ್ಮ ಡೈರಿ, ಅಂಗಡಿಯಿಂದ ತರುವ ಸಾಮಾನುಗಳ ಚೀಟಿ, ಫೋನ್ ಡೈರಿ ಕನ್ನಡದಲ್ಲಿರಲಿ. ಒಟ್ಟಿನಲ್ಲಿ ಹೇಳುವದಾದರೆ ಕನ್ನಡ ಬಳಸುವದು ಅಭಿಮಾನಕ್ಕೆ ಅಥವಾ ಇಂಗ್ಲೀಷ್ ಬರುವದಿಲ್ಲವೆಂದು ಆಗದಿರಲಿ. ಕನ್ನಡಿಗರಾದ ನಾವು ಕನ್ನಡ ಬಳಸದೇ ಇಂಗ್ಲೆಂಡಿನವರು ಕನ್ನಡ ಬಳಸುತ್ತಾರೆಯೇ ಎಂಬ ಮನೋಭಾವ ನಿಮ್ಮದಾಗಿರಲಿ. ಇಂಗ್ಲೀಷ್ ಗೊತ್ತಿದ್ದರೂ ಕನ್ನಡ ಬಳಸಿ. ಕನ್ನಡಿಗರು ಹೆಚ್ಚು ಕನ್ನಡ ಬಳಸಿದಂತೆ ಕನ್ನಡದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಬೇರೆ ಭಾಷೆಯವರೂ ಸಹ ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕನ್ನಡ ಭಾಷೆ ಹೆಚ್ಚು ಪ್ರಸ್ತುತವಾಗುತ್ತದೆ.
ಕನ್ನಡದಲ್ಲಿ ಮೊಬೈಲ್, ಸಾಫ್ಟ್ ವೇರ್ ಬರಲು ಸಹ ಸ್ಪೂರ್ತಿಯಾಗುತ್ತದೆ.

ಕನ್ನಡ ಭಾಷೆಯ ಅಳಿವು/ಉಳಿವು ನಮ್ಮ ಕೈಯಲ್ಲಿದೆಯೇ ಹೊರತು ಯಾವ ಸರಕಾರದ ಕೈಯಲ್ಲೂ ಇಲ್ಲ. ಈಗಿನ ಬೃಷ್ಟಾಚಾರದ ಕೂಪದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂದು ಬಿರುದು ಬಂದು ಕೇಂದ್ರ ಸರಕಾರದಿಂದ ಸಂಶೋಧನೆಗೆ ಹಣ ಬಿಡುಗಡೆ ಆದರೆ ಒಂದಿಷ್ಟು ಜನ ಆ ಹಣ ತಿಂದು ತೇಗುತ್ತಾರೆಯೇ ಹೊರತೂ ಕನ್ನಡ ಉದ್ಧಾರ ಖಂಡಿತ ಆಗದು.ಕನ್ನಡ ಭಾಷೆ ನಿಜಕ್ಕೂ ಉದ್ಧಾರವಾಗಲು ಪ್ರತಿಹಂತದಲ್ಲೂ ಜನ ಬಳಸಬೇಕು. ಕನ್ನಡವನ್ನು ಮೆರೆಸಬೇಕು.

ಇಲ್ಲಿಯವರೆಗೆ ಓದಿದರೆ ಸಾಲದು ಕಾರ್ಯರೂಪಕ್ಕೆ ತನ್ನಿ. ಖಂಡಿತ ಆಗ ಜಯ ಕನ್ನಡಮ್ಮನದಾಗುತ್ತದೆ. ಕನ್ನಡದ ಕಂಪು ಪಸರಿಸುತ್ತದೆ. ಆ ಹಠ ನಿಮಗಿದೆಯೇ? ಇನ್ನೂ ಯಾವರೀತಿ ಕನ್ನಡ ಬೆಳೆಯಬಹುದು ನಿಮಗೆ ತಿಳಿದಿದ್ದರೆ ಕಮೆಂಟ್ ಹಾಕಿ. ನಿಮ್ಮ ಅನಿಸಿಕೆ ತಿಳಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.