ಸೆಪ್ಟೆಂಬರ್ 4, 2020
ಕನ್ನಡ

ಎತ್ತ ಸಾಗಿದೆ ಕನ್ನಡ?

ಸ್ನೇಹಿತರಿಗೆ ಹಂಚಿಕೊಳ್ಳಿ

ಯಾವುದೇ ಪ್ರಪಂಚದಲ್ಲಿ ಭಾಷೆ ಇರಬಹುದು. ಅದರ ಭವಿಷ್ಯ ಎಷ್ಟರ ಮಟ್ಟಿಗೆ ಉಜ್ವಲ ಆಗಿದೆ ಎಂಬುದನ್ನು ಅದನ್ನು ಈಗ ಎಷ್ಟು ಜನ ಬಳಸುತ್ತಿದ್ದಾರೆ ಎಂಬುದರ ಮೇಲಲ್ಲ, ಮುಂದಿನ ಪೀಳಿಗೆ ಅಂದರೆ ಮಕ್ಕಳು ಹಾಗೂ ಹೊಸ ತಂತ್ರಜ್ಞಾನಗಳಲ್ಲಿ ಬಳಕೆ ಆಗುತ್ತಿದೆ ಎಂಬುದರ ಮೇಲೆ ನಿರ್ಧರಿಸಬಹುದು.

ಬನ್ನಿ ಕನ್ನಡದ ಭವಿಷ್ಯ ಹೇಗಿದೆ ನೋಡೋಣ. ಕನ್ನಡದ ಮಕ್ಕಳಿಗೆ ಅಂದರೆ ಮುಂದಿನ ಪೀಳಿಗೆಗೆ ಯಾವ ಯಾವ ಆಯ್ಕೆ ಇದೆ ಎಂಬುದನ್ನು ಮೊದಲು ನೋಡೋಣ. ಟಿವಿಯ ವಿಚಾರಕ್ಕೆ ಬಂದರೆ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಕನ್ನಡದ ಮಕ್ಕಳು ಹೆಚ್ಚು ಪೋಗೋ, ಕಾರ್ಟೂನ್ ನೆಟ್ ವರ್ಕ್, ಡಿಸ್ನಿ, ಚುಟ್ಟಿ ನೋಡುತ್ತಾರೆ. ಕನ್ನಡದಲ್ಲಿ ಚಿಂಟು ಎಂಬ ಚಾನೆಲ್ ಬಂದಿತ್ತಾದರೂ ಈಗ ಅದರ ಸುದ್ದಿ ಇಲ್ಲ.

ಇನ್ನು ಮಕ್ಕಳ ಪುಸ್ತಕಗಳು ಅಮರ ಚಿತ್ರ ಕಥೆ, ಟ್ವಿಂಕಲ್, ಮ್ಯಾಜಿಕ್ ಪಾಟ್, ಹೊಸ ಚಂದಮಾಮ ಇವು ಇಂಗ್ಲೀಷ್ ನಲ್ಲಿ ಮಾತ್ರ ಲಭ್ಯ ಇವೆ. ಅಮರ ಚಿತ್ರಕಥೆಯ ಕೆಲವೇ ಕೆಲವು ಕಥೆಗಳು ಕನ್ನಡದಲ್ಲಿ ಈಗ ಲಭ್ಯ ಇದೆ ಉಳಿದವು ಇಲ್ಲ. ಹಳೇ ಚಂದಮಾಮ, ಬಾಲಮಂಗಳ, ತುಂತುರು, ಬಾಲಮಿತ್ರ ಮಾತ್ರ ಕನ್ನಡದಲ್ಲಿ ಇವೆ.

ಮಕ್ಕಳ ಇಷ್ಟ ಪಡುವ ಅನಿಮೇಶನ್ ಚಿತ್ರಗಳು, ಹ್ಯಾರಿ ಪಾಟರ್, ಶಕ್ತಿಮಾನ್ ದಾರವಾಹಿ ಇತ್ಯಾದಿ ಇಂಗ್ಲೀಷ್, ಹಿಂದಿ ಹಾಗು ತಮಿಳಲ್ಲಿ ಲಭ್ಯ ಇವೆ. ಕನ್ನಡದಲ್ಲಿ ಕೆಲವು ಅನಿಮೇಶನ್ ಲಭ್ಯ ಇವೆ ಆದ್ರೂ ಜನಪ್ರಿಯವಾದದ್ದು ಲಭ್ಯವಿಲ್ಲ.

ಮಕ್ಕಳ ಆಟಿಕೆಗಳಲ್ಲಿ  ಇಂಗ್ಲೀಷ್ ಎಕಸ್ವಾಮ್ಯತ್ವ. ಅನೇಕ ವಿದೇಶಿ ಬ್ರಾಂಡ್ ಆಟಿಕೆಗಳು ಬಂದಿದ್ದು ಅವು ಯಾವವು ಕನ್ನಡದಲ್ಲಿಲ್ಲ.

 ಇನ್ನು ಮಕ್ಕಳ ಶಿಕ್ಷಣದ ವಿಚಾರ ಬಂದರೆ ಈಗ ಹೆಚ್ಚಿನ ಪಾಲಕರು ಬಯಸುವದು ಆಂಗ್ಲ ಮಾಧ್ಯಮವನ್ನು. ಅಷ್ಟೇ ಯಾಕೆ ಪ್ರತಿ ವಸ್ತುಗಳ ಆಂಗ್ಲ ಹೆಸರನ್ನು ಮೊದಲು ಕಲಿಸ ಬಯಸುತ್ತಾರೆ. ಹೆಚ್ಚಿನ ಆಂಗ್ಲ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವದು ನಿಷೇಧ. ಅಪ್ಪಿ ತಪ್ಪಿ ಮಾತನಾಡಿದರೆ ದಂಡ ಕೂಡ ಇದೆ. ಪಾಲಕರಿಗೂ ಮಕ್ಕಳ ಜೊತೆ ಆಂಗ್ಲ ಭಾಷೆಯಲ್ಲೇ ಮಾತನಾಡಲು ಉಪದೇಶ ಬೇರೆ.

ಹೊಸ ತಂತ್ರಜ್ಞಾನ ಹಾಗೂ ದಿನಬಳಕೆಯಲ್ಲಿ ಕನ್ನಡದ ಬೆಳವಣಿಗೆ ಒಮ್ಮೆ ನೋಡೋಣ.

ಟಿವಿ ಬಂದು ೨೫ ವರ್ಷ ಅದ್ರೂ ಅದರ ರಿಮೋಟ್ ಮೇಲಾಗಲೀ, ಡಿಸ್ಪ್ಲೇ ಮೇಲಾಗಲಿ ಕನ್ನಡ ಬರಲಿಲ್ಲ. ಟಾಟಾ ಸ್ಕೈ ಅಲ್ಲಿ ಡಿಟಿಎಚ್ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಇತ್ಯಾದಿ ಭಾಷೆಯಲ್ಲಿ ಸೌಲಭ್ಯ ಇದೆ ಕನ್ನಡದಲ್ಲಿಲ್ಲ. ಕೆಲವು ನೋಕಿಯಾ ಮೊಬೈಲ ಮಾಡೆಲ್ ಗಳಲ್ಲಿ ಕನ್ನಡ ಸೌಲಭ್ಯ ಇದೆ. ಬಿಟ್ಟರೆ ಹೆಚ್ಚಿನ ಯಾವ ಮೊಬೈಲಲ್ಲೂ ಕನ್ನಡ ಇಲ್ಲ. ಸ್ಮಾರ್ಟ್ ಫೋನು, ಟ್ಯಾಬ್ಲೆಟ್ ಗಳಲ್ಲೂ ಕನ್ನಡ ಶೂನ್ಯ. ಕೇವಲ ಅದರ ಬ್ರೌಸರ್ ಅಲ್ಲಿ ವಿಸ್ಮಯ ನಗರಿ, ಸಂಪದ ನೋಡೀ ಖುಷಿ ಪಡಬೇಕು ಅಷ್ಟೇ! ರೇಲ್ವೆ ಬುಕಿಂಗ್, ಬಸ್ ಬುಕಿಂಗ್ ವಿವರ ಎಲ್ಲ ಇಂಗ್ಲೀಷ್ ಅಲ್ಲಿ. ಅಂಚೆ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿ ಕನ್ನಡದ ಆಟ ನಡೆಯದು. ಕರ್ನಾಟಕದೊಳಗಿನ ಜಾಗಕ್ಕೆ ಕನ್ನಡದಲ್ಲಿ ವಿಳಾಸ ಬರೆದರೆ ಆಗುತ್ತೆ. ಆದ್ರೆ ಇಂಗ್ಲೀಷ್ ಬಲ್ಲವರು ಇಂಗ್ಲೀಷ್ ನಲ್ಲೇ ಬರೆಯುತ್ತೇವೆ! ಇನ್ನು ಅಂತರ್ಜಾಲದಲ್ಲೂ ಹೆಚ್ಚಿನ ಸೌಲಭ್ಯ ಕನ್ನಡದಲ್ಲಿ ಲಭ್ಯವಿಲ್ಲ. ಕಂಪ್ಯೂಟರ್ ಅಲ್ಲೂ ಕನ್ನಡದ ಕಂಪನ್ನು ಬೀರುವ ಉತ್ತಮ ಸಾಫ್ಟ್ ವೇರ್ ಗಳ ಕೊರತೆ ಇದೆ.

ಸ್ಮಾರ್ಟ್ ಫೋನು ಇವೆಲ್ಲ ಹೋಗಲಿ ಅನೇಕ ಕಡೇ ಹೋಟೆಲ್ ಮೆನು, ಅಂಗಡಿ ಬೋರ್ಡ್ ಇತ್ಯಾದಿಗಳಲ್ಲಿ ಕೂಡ ಕನ್ನಡ ಸ್ಥಾನ ಪಡೆಯಲು ಸೋತಿದೆ.ಅಷ್ಟೇ ಯಾಕೆ ದಿನಬಳಕೆಯ ವಸ್ತುಗಳ ಮೇಲೂ ಕನ್ನಡ ಇಲ್ಲ.

ಖಾಸಗಿ ಕಚೇರಿಗಳಲ್ಲಿ ಕನ್ನಡ ತನ್ನಸ್ಥಾನ ಪಡೆದಿಲ್ಲ. ಅಲ್ಲಿ ಇಂಗ್ಲೀಷ್ ಗೆ ರಾಜ ಮರ್ಯಾದೆ. ಜಾಹಿರಾತು ಲೋಕಕ್ಕೆ ಬಂದರೆ ಹಲವು ಕಡೆ ಕೆಟ್ಟ ಕನ್ನಡ ಅನುವಾದ, ಬಳಕೆ ಇನ್ನು ಹಲವು ಕಡೆ ಕನ್ನಡ ಲಿಪಿ ಪೂರ್ತಿ ಬಳಕೆ ಮಾಡದಿರುವಿಕೆ ಹೀಗೆ ಹಲವು ಸಮಸ್ಯೆಗಳಿವೆ.

ಕನ್ನಡದ ಸಿನಿಮಾ ನಟ-ನಟಿಯರ ಮಾತನ್ನು ಟಿವಿಯಲ್ಲಿ ಕೇಳಿ. ಪೂರ್ತಿ ಕನ್ನಡ ಮಾತನಾಡುವದು ಅವಮಾನಕರ ಎಂಬಂತೆ ಮಧ್ಯೆ ಇಂಗ್ಲೀಷ್ ಸಾಲುಗಳನ್ನು ತುರುಕುತ್ತಾರೆ. ಹಲವು ಬಾರಿ ಇಂಗ್ಲೀಷ್ ಮಧ್ಯೆ ಕನ್ನಡ ಮಾತನಾಡುತ್ತಾರೆ. ಹೊರ ರಾಜ್ಯದ ನಟರು ಹೀಗೆ ಮಾಡಿದರೆ ಅರ್ಥ ಆಗುವಂತದ್ದು. ನಮ್ಮವರೇ ಆದ ಸುದೀಪ್, ಶಿವರಾಜಕುಮಾರ, ರಮ್ಯ ಹೀಗೆ ಮಾಡಿದರೆ? ಇವರೆಲ್ಲರಿಗಿಂತ ಹೊರ ರಾಜ್ಯಗಳಿಂದ ಬಂದು ಕನ್ನಡ ಕಲಿತು ಮಾತನಾಡುವ ಪೂಜಾ ಗಾಂಧಿ ಅಂತವರು ಅಭಿನಂದಾರ್ಹರು!

ಕನ್ನಡ ಸಿನಿಮಾದ ಪೋಸ್ಟರ್, ಜಾಹೀರಾತಲ್ಲಿ “Audio Released” , “Happy Birthday”, “Coming soon”, “Blockbuster Hit” ಹೀಗೆ ಆಂಗ್ಲ ಲಿಪಿಯಲ್ಲಿ ಬರೆದಿರುತ್ತಾರೆ ಹೊರತು ಕನ್ನಡದಲ್ಲಿ ನೀಟಾಗಿ “ಚಿತ್ರದ ಹಾಡು ಬಿಡುಗಡೆ ಆಗಿದೆ”, “ಹುಟ್ಟು ಹಬ್ಬದ ಶುಭಾಶಯಗಳು”, “ಶೀಘ್ರದಲ್ಲೇ ಬರಲಿದೆ” , “ಮರೆಯಲಾರದ ಗೆಲುವು” ಇತ್ಯಾದಿ ಬರೆದಿರುವದಿಲ್ಲ. ಕೆಲವೊಮ್ಮೆ ಕೆಟ್ಟದಾಗಿ ದ್ವನಿ ಸುರುಳಿ ಬಿಡುಗಡೆ ಆಗಿದೆ ಎಂಬ ಪದ ಬಳಸಲಾಗುತ್ತೆ. ನನ್ನ ಪ್ರಕಾರ ಚಿತ್ರದ ಹಾಡು ಅಥವಾ ಸಿಡಿ ಬಿಡುಗಡೆ ಆಗಿದೆ ಎಂಬುದೇ ಸೂಕ್ತ. ಇಂದು ಕ್ಯಾಸೆಟ್ ಬಳಕೆ ಕಡಿಮೆ ಆಗಿದೆ.

ಅತಿ ವಿಚಿತ್ರ ಎಂದರೆ ಹಲವು ತಂತ್ರಜ್ಞಾನ ಇತ್ಯಾದಿಗಳು ಬಂದು ದಶಕಗಳೇ ಕಳೆದರು ಅದು ಕನ್ನಡದಲ್ಲಿ ಬರದೇ ಕನ್ನಡಿಗರೇ ಇಂಗ್ಲೀಷ್ ಕಲಿಯುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವದು. ಇನ್ನು ಸಾಫ್ಟ್ ವೇರ್, ಕಾಲ್ ಸೆಂಟರ್, ವೈಧ್ಯಕೀಯ, ಇಂಜನಿಯರಿಂಗ್ ಇತ್ಯಾದಿ ಉದ್ಯೋಗಕ್ಕೆ ಕೂಡಾ ಇಂಗ್ಲೀಷ್ ಅನಿವಾರ್ಯತೆ ಇದೆ.

ಬರೀ ರಾಜಕೀಯಕ್ಕಾಗಿ, ಸ್ವಾರ್ಥಕ್ಕಾಗಿ ಕನ್ನಡ ಹೋರಾಟ, ಸ್ವಾರ್ಥ ಚಿಂತನೆ, ಸ್ವಜನ ಪಕ್ಷಪಾತ, ಕನ್ನಡ ಸರಿಯಾಗಿ ಬಳಸದಿರುವಿಕೆ, ಸುಲಭ ಶಬ್ದ ಕನ್ನಡದಲ್ಲಿದ್ದರೂ ಕ್ಲಿಷ್ಟ ಪದ ಬಳಸುವದು, ಅಂಧ ಆಂಗ್ಲ ಅನುಕರಣೆ ಇತ್ಯಾದಿ ಗಳು ಕನ್ನಡದ ಬೆಳವಣಿಗೆಗೆ ಗ್ರಹಣ ಹಿಡಿಸಿವೆ. ಕನ್ನಡಿಗರ ಆತ್ಮವಿಶ್ವಾಸದ ಕೊರತೆ, ಬಡತನ, ವ್ಯಾಪಾರೀಕರಣ ಕೆಟ್ಟದ್ದು ಎಂಬ ಮನೋಭಾವ ಕೂಡ ಕನ್ನಡದ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಕನ್ನಡದಲ್ಲಿ ಏನೆ ಬಂದರು ಖುಷಿಯಿಂದ ಬಳಸಿ ಮುದ್ದಾಡುವ ಕನ್ನಡಿಗರಿದ್ದಾರೆ. ಕನ್ನಡದಲ್ಲಿ ಇದ್ಯಾಕಿಲ್ಲ ಎಂದು ಪರಿತಪಿಸುವ ಕನ್ನಡಿಗರಿದ್ದಾರೆ. ಕನ್ನಡದಲ್ಲಿ ತರುವ ಸೇವೆಗಳು ವ್ಯವಹಾರಿಕವಾಗಿ ಲಾಭದಾಯಕವಾದರೆ ಹೆಚ್ಚು ಹೆಚ್ಚು ಜನರಿಗೆ ಅದನ್ನು ನೀಡಲು ಸಾಧ್ಯವಾಗುತ್ತದೆ. ಆದ್ರೆ ಕೆಲವೇ ಕೆಲವು ರಂಗಗಳನ್ನು ಹೊರತು ಪಡಿಸಿದರೆ ಉಳಿದ ಕಡೆ ಅಕಸ್ಮಾತ್ ಕನ್ನಡದಲ್ಲಿ ತರಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗುವ ಸಾಧ್ಯತೆ ಬಹಳ ಕಡಿಮೆ. ಹೆಚ್ಚಿನ ಕಡೆ ಈಗಾಗಲೇ ಇಂಗ್ಲೀಷ್ ಗೆ ಒಗ್ಗಿ ಹೋಗಿರುವ ನಾವು ಕನ್ನಡದ್ದನ್ನೂ ಆಂಗ್ಲ ಭಾಷೆಯಲ್ಲಿ ಲಭ್ಯವಿರುವ ಸೌಲಭ್ಯಕ್ಕೆ ಹೋಲಿಸಿ ತಿರಸ್ಕರಿಸುವ ಸಾಧ್ಯತೆ ಹೆಚ್ಚು. ಕನ್ನಡದಲ್ಲಿ ಕಡಿಮೆ ಬೆಲೆಗೆ ಸೌಲಭ್ಯ ಒದಗಿಸಲು ಸಾಧ್ಯವಾಗದು. ಈಗಾಗಲೇ ಇಂಗ್ಲೀಷ್ ಅಲ್ಲಿ ಸೌಲಭ್ಯ ನೀಡುತ್ತಿರುವವರು ಕನ್ನಡದಲ್ಲಿ ನೀಡಲು ಮನಸ್ಸು ಮಾಡಿದರೆ ಮಾತ್ರ ಸಾಧ್ಯ.

 ಒಟ್ಟಿನಲ್ಲಿ ಹೇಳುವದಾದರೆ ಕನ್ನಡದ ಪತನಕ್ಕೆ ಉತ್ತಮ ಕನ್ನಡ ಕಲಿಕೆಯನ್ನು ಮಕ್ಕಳಿಂದ ಕಸಿಯುವದರ ಮೂಲಕ ಹಾಗೂ ಅನೇಕ ರಂಗಗಳಲ್ಲಿ ಇಂಗ್ಲೀಷ್ ನಷ್ಟೇ ಸಮರ್ಥವಾದ ಕನ್ನಡ ಸೌಲಭ್ಯ ನೀಡದಿರುವದರ ಮೂಲಕ ಅಡಿಗಲ್ಲು ಹಾಕಿದ್ದೇವೆ. ಕನ್ನಡಿಗರು ಸೋಮಾರಿತನ ಬಿಟ್ಟು ಛಲ, ಸಾಧನೆ ಮೂಲಕ ಈ ಟ್ರೆಂಡ್ ಅನ್ನು ತಡೆದು ಕನ್ನಡದ ಅವನತಿ ತಡೆಯಲು ಸಾಧ್ಯವಿದೆ. ಆದ್ರೆ ಒಮ್ಮೆ ಕನ್ನಡದ ಸ್ಥಾನ ಇಂಗ್ಲೀಷ್ ಪಡೆದುಕೊಂಡರೆ ಕನ್ನಡವನ್ನು ಮತ್ತೆ ಪುನರುಜ್ಜೀವನ ಗೊಳಿಸುವದು ಅಸಾಧ್ಯ.ಉದಾಹರಣೆಗೆ ಒಮ್ಮೆ ಯೋಚಿಸಿ ನೋಡೀ. ಈಗ ಹಳಗನ್ನಡವನ್ನು ಪುನರುಜ್ಜೀವನಗೊಳಿಸಲು ಸಾಧ್ಯಾನಾ ಅಂತಾ?

ಕೊನೆಯಲ್ಲಿ ಒಂದು ಮಾತು ನಾನು ಇಂಗ್ಲೀಷ್ ದ್ವೇಷಿ ಅಲ್ಲ. ನನಗೆ ಹೊಟ್ಟೆಗೆ ಅನ್ನ ಹಾಕುತ್ತಿರುವದು ಇಂಗ್ಲೀಷೇ. ಅದರೆ ಕನ್ನಡ ಭಾಷೆ ಬೆಳೆಯಲಿ ಎಂಬುದೇ ಈ ಲೇಖನದ ಉದ್ದೇಶ.ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.