ಸೆಪ್ಟೆಂಬರ್ 4, 2020

ಬಾಲ ವಿಸ್ಮಯದ ಪರಿಚಯ

ಸ್ನೇಹಿತರಿಗೆ ಹಂಚಿಕೊಳ್ಳಿ

ನಮ್ಮ ಬಾಲ್ಯದ ದಿನದ ನೆನಪು ಎಷ್ಟು ಸವಿಯಾಗಿದೆ ಅಲ್ವಾ? ಅಜ್ಜಿಯ ಮನೆಗೆ ಹೋಗಿ ಆಡಿದ ದಿನಗಳು ಚಂದಮಾಮ, ಬಾಲಮಿತ್ರ, ಟಿಂಕಲ್ ಹಾಗೂ ಬಾಲಮಂಗಳ ಓದಿದ ನೆನಪು. ಶಾಲೆಯಲ್ಲಿ ಕಳೆದ ಕ್ಷಣಗಳು. ಹೀಗೆ ಹತ್ತು ಹಲವಾರು ನೆನಪುಗಳು ಬಾಲ್ಯವನ್ನು ಅವಿಸ್ಮರಣೀಯವಾಗಿ ಮಾಡಿವೆ.

ಆಲದ ಮರದ ಬಿಳಲಿಗೆ  ನೇತಾಡಿ ಆಡಿದ ಜೋಕಾಲಿ. ಹಳ್ಳಿಯ ತೋಟದ ನಡುವಿನ ಗುಂಡಿಯಲ್ಲಿ ಈಜಾಡಿದ್ದು. ಬೆಟ್ಟದ ಮೇಲಿನ ಗೇರು, ಹುಳಿಮಾವು, ಮುಳ್ಳು ಹಣ್ಣು ಹಾಗು ಹಲಸಿನ ಹಣ್ಣು ತಿಂದು ತೇಗಿದ್ದು.

ಶಾಲೆಗೆ ಹೋಗುವ ದಾರಿಯಲ್ಲಿ ಬೋರೆ ಹಣ್ಣಿನ ಮರಕ್ಕೆ ಹೊಡೆದು ಉದುರಿಸಿದ ಹಣ್ಣುಗಳು. ಹುಣಿಸೆ ಹಣ್ಣು ನೆಲ್ಲಿ ಚೆಟ್ಟು ಊಟ ಆದಮೇಲೆ ತಿಂದು ಬಂದ ನಿದ್ದೆಯ ಜೊಂಪು. ಆಟ ಪಾಠ ಹೀಗೆ ದಿನ ಸಂಜೆ ಕೈಕಾಲು ತೊಳೆದು ದೇವರಿಗೆ ಕೈಮುಗಿದು ಹೇಳುತ್ತಿದ್ದ ಭಜನೆ, ಮಗ್ಗಿ, ಪದ್ಯಗಳು. ಅಮ್ಮ ಹೇಳಿದ ಕತೆ ಕೇಳುತ್ತಾ, ರಾತ್ರಿ ಟಿವಿ ನೋಡುತ್ತಾ ಹಾಗೇ ನಿದ್ದೆ ಹೋಗುತ್ತಿದ್ದ ಪರಿ ಎಷ್ಟು ನೆನೆಸಿಕೊಂಡರೂ ಚೆನ್ನ.

ಇಂದು ನಮ್ಮ ಮಕ್ಕಳ ಬಾಲ್ಯ ಕನ್ನಡ ಭಾಷೆಯ ಪರಿಚಯ ಆಗುವುದರ ಒಳಗೆ ಇಂಗ್ಲಿಷ್ ಲಿಪಿ ಕಲಿಯಲಾರಂಭಿಸಿದ ಅವರು ಟಿವಿ ಸ್ಮಾರ್ಟ್ ಫೋನ್ ಕಂಪ್ಯೂಟರ್ ಹೀಗೆ ಹತ್ತು ಹಲವು ವಿಷಯ ಅವರನ್ನು ಆವರಿಸಿಕೊಂಡಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ನಮಗಿಂತ ಹೆಚ್ಚು ಸ್ಟ್ರೆಸ್ಗೆ ಒಳಗಾಗುತ್ತಿದ್ದಾರೆ. 

ಒಂದು ಕಡೆ ಕಡಿಮೆಯಾದ ಅವಿಭಕ್ತ ಕುಟುಂಬಗಳು, ಹೆಚ್ಚಿದ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಕೆಲಸದಲ್ಲಿ ಬ್ಯುಸಿಯಾದ ತಂದೆ ತಾಯಿಗಳು ಹಾಗೂ ತಪ್ಪಿದ ಅಜ್ಜಿ ಮನೆಗೆ ಹೋಗುವ ಪರಿಪಾಠ. ಸಮ್ಮರ್ ಕ್ಯಾಂಪ್ ಕ್ಲಾಸ್ಗಳು ಹೀಗೆ ಬ್ಯುಸಿಯಾದ ಮಕ್ಕಳು ಅವರನ್ನು ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಕನ್ನಡ  ಇವುಗಳಿಂದ ದೂರ ಮಾಡಿವೆ. 

ಒಂದು ಮಗುವಿನ ಮನಸ್ಸು ಹಸಿ ಮಣ್ಣು ಇದ್ದಂತೆ. ಮಗುವಿಗೆ ನೀಡುವ ಸಂಸ್ಕಾರ ತಿಳಿವಳಿಕೆ ಮನೆಯ ವಾತಾವರಣ ಅದರ ವ್ಯಕ್ತಿತ್ವವನ್ನು ರೂಪು ಗೊಳಿಸುತ್ತವೆ.

ಉತ್ತಮ ವಿಚಾರ ಚಿಂತನೆಗಳ ಮೂಲಕ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣ ಆಗೊಣ.  

ಬಾಲ ವಿಸ್ಮಯದ ಗುರಿ ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ದೇಶ, ಭಕ್ತಿ, ಸ್ಫೂರ್ತಿ, ಮನೋರಂಜನೆ, ಮಾಹಿತಿ, ತಿಳಿವಳಿಕೆ ನೀಡುವ ವಿಷಯಗಳನ್ನು ಹಂಚಿ ಕೊಳ್ಳುವುದು.

ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಜಾನಪದ ಹಾಗೂ ಪುರಾಣಗಳು ಹೀಗೆ ಹತ್ತು ಹಲವು ಮೂಲಗಳಿಂದ ಲಭ್ಯವಿರುವ ಕಥೆಗಳನ್ನು ನೀತಿಗಳನ್ನು ಹಂಚಿಕೊಳ್ಳುವುದು ಸಹ ಗುರಿ.

ಇಂದು ಒಬ್ಬ ಉತ್ತಮ ಪಾಲಕರಾಗಿ ಶಿಕ್ಷಕರಾಗಿ ಇಂತಹ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ ಎಂಬುದು ನಮ್ಮ ವಿನಮ್ರ ವಿನಂತಿ.

ಬಾಲ ವಿಸ್ಮಯ ಧನಾತ್ಮಕ ಅಂಶಗಳನ್ನು ಮಾತ್ರ ತೋರಿಸುತ್ತದೆ. ಇಲ್ಲಿ ಋಣಾತ್ಮಕ ಅಂಶಗಳಿಗೆ ಜಾಗವಿಲ್ಲ. ಬನ್ನಿ ಮಕ್ಕಳ ಕಾಲ್ಪನಿಕ ವಿಸ್ಮಯ ಜಗತ್ತನ್ನು ವಿಹರಿಸೋಣ ಬಾಲ ವಿಸ್ಮಯ ತಾಣದ ಮೂಲಕ. ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಯಾವಾಗಲೂ ಸ್ವಾಗತ ಸುಸ್ವಾಗತ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.