ಸೆಪ್ಟೆಂಬರ್ 4, 2020

ಕನ್ನಡದಲ್ಲಿ ಸಹಿ ಮಾಡಿದಾಗ ಏನಾಗುತ್ತೆ?

ಸ್ನೇಹಿತರಿಗೆ ಹಂಚಿಕೊಳ್ಳಿ

ಸುಮಾರು 12 ವರ್ಷ ಹಿಂದಿನ ಘಟನೆ. “ಸರ್ ಕನ್ನಡದಲ್ಲಿ ಸೈನ್ ಮಾಡಿದರೆ ಪ್ರಾಬ್ಲಮ್ ಆಗುತ್ತೆ” ಟ್ಯಾಕ್ಸ್ ಫಾರಮ್ ಅಲ್ಲಿ ನನ್ನ ಸಹಿ ನೋಡಿ ಎಂದ ಟ್ಯಾಕ್ಸ್ ಕನ್ಸಲ್ಟಂಟ್. ಹೋದ ತಿಂಗಳಷ್ಟೇ ಹೊಸ ಪ್ಯಾನ್ ಕಾರ್ಡ್ ಅರ್ಜಿ ಹಾಕುವಾಗ ದೇವನಾಗರಿ ಹಾಗೂ ಕನ್ನಡದಲ್ಲಿ ಸಹಿ ಮಾಡಿರುವ ಕಾರ್ಡ್ ಪಡೆದಿದ್ದೆ. ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯ್ತು.

ಹಿಂಜರಿಯುತ್ತಲೇ ಕೇಳಿದೆ “ಏನಾಗುತ್ತೆ?” ಕನ್ನಡದಲ್ಲಿ ಸಹಿ ಮಾಡಿದರೆ ಅಫಡವಿಟ್ ಹಾಕಬೇಕು, ಸಾಲ ತೆಗೆದುಕೊಳ್ಳುವಾಗ ಇನ್ನೂ ಹಲವು ಕಡೆ ಅಪ್ಡೇಟ್ ಹಾಕಲೇಬೇಕು. ಸಹಿ ಇಂಗ್ಲಿಷ್ ಅಲ್ಲಿ ಮಾಡಿದ್ರೆ ಈ ಸಮಸ್ಯೆ ಇರಲ್ಲ ಬದಲಾಯಿಸಿಕೊಳ್ಳಿ ಎಂಬ ಉತ್ತರ ಬಂತು. ಆವಾಗ ಮೊಂಡು ಧೈರ್ಯ ಮಾಡಿ ಹೊಸ ಸಹಿ ಉಳಿಸಿಕೊಂಡೆ. ಈಗ ಆ ನಿರ್ಧಾರ ಸರಿಯಾಗೇ ಇತ್ತು ಎಂದು ಮನವರಿಕೆ ಆಗಿದೆ.

ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡುವ ಮೊದಲು ನಾನು ಬಳಸುತ್ತಿದ್ದದ್ದು ಇಂಗ್ಲಿಷ್ ಸಹಿಯನ್ನೇ! 10ನೇ ತರಗತಿಗೆ ಅರ್ಜಿಯ ತುಂಬುವಾಗ ಅದಕ್ಕೆ ಸಹಿ ಹಾಕಬೇಕಿತ್ತು. ಅಲ್ಲಿಯವರೆಗೆ ಎಲ್ಲೂ ಸಹಿ ಹಾಕಿರಲಿಲ್ಲ. ಅದು ಹೇಗಿರಬೇಕೆಂಬ ಪರಿಕಲ್ಪನೆ ಸಹ ನನಗೆ ಇರದ ಕಾಲವದು. ಪ್ರಾಧ್ಯಾಪಕರ ಬಳಿ ಕೇಳಿದೆ ಹೇಗೆ ಸಹಿ ಮಾಡಲಿ ಎಂದು. ಇಂಗ್ಲಿಷ್ನಲ್ಲಿ ನಿನ್ನ ಹೆಸರನ್ನು ವಿಶಿಷ್ಟ ರೀತಿಯಲ್ಲಿ ಬರಿ. ಅದನ್ನು ಹಾಗೆಯೇ ಎಲ್ಲ ಕಡೆ ಬರೆಯಬೇಕು ಎಂಬ ಮಾರ್ಗದರ್ಶನ ಬಂತು. ಆಗ ಅಲ್ಲಿಯೇ ಒಂದು ಖಾಲಿ ಹಾಳೆಯ ಮೇಲೆ ಇಂಗ್ಲಿಷ್ ಸಹಿಯನ್ನು ಪ್ರಾಕ್ಟಿಸ್ ಮಾಡಿ ಅರ್ಜಿಯಲ್ಲಿ ಸಹಿ ಹಾಕಿದ್ದೆ.

ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದಾಗ ಸ್ವಲ್ಪ ಸಮಯದ ನಂತರ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವಾಗ ದೇವನಾಗರಿ ಕನ್ನಡ ಮಿಶ್ರಿತ ಸಹಿ ಮಾಡಿದೆ. ಆಮೇಲೆ ಪಾಸ್ಪೋರ್ಟ್, ಹೊಸ ಖಾತೆಗಳು ಎಲ್ಲಕಡೆ ಕನ್ನಡ ಸಹಿಯ ಮೆರವಣಿಗೆ ಮುಂದುವರೆಯಿತು. ಬಹುಶಃ ಕನ್ನಡದಲ್ಲಿ ಸಹಿ ಮಾಡಲು ನನಗೆ ಸ್ಪೂರ್ತಿಯಾಗಿದ್ದು ನಾಗತಿಹಳ್ಳಿ ಚಂದ್ರಶೇಖರ್ ಅವರ ಕನ್ನಡದ ಸಹಿ ಹಾಗೂ ಕನ್ನಡದಲ್ಲಿದ್ದರೆ ತಪ್ಪೇನು ಅನ್ನುವ ಮನೋಭಾವ.

ಈ ಸಹಿಯ ಕಾರಣದಿಂದ ಸಾಲ ತೆಗೆದುಕೊಳ್ಳುವಾಗ ಅಫಿಡೆವಿಟ್ ಸಲ್ಲಿಸಬೇಕಾಗಿ ಬಂದಿದೆ. ಆದರೆ ಇದು ದೊಡ್ಡ ಸಮಸ್ಯೆಯೇನಲ್ಲ. ಸಾಮಾನ್ಯವಾಗಿ ಬ್ಯಾಂಕಿನವರು ಇದಕ್ಕೆ ಸಹಾಯ ಮಾಡುತ್ತಾರೆ. ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆ ಇದ್ದರೂ ಕನ್ನಡದಲ್ಲಿ ನನಗೆ ನಿಯಮಗಳನ್ನು ವಿವರಿಸಲಾಗಿದೆ ಎಂದು ನಾನು ಹಲವು ಬಾರಿ ಅಫಿಡವಿಟ್ ಸಲ್ಲಿಸಿದ್ದೇನೆ. ಕೇವಲ ಸಹಿ ಇಂಗ್ಲೀಷ್ ನಲ್ಲಿದೆ ಎಂಬ ಕಾರಣಕ್ಕೆ ಆತನಿಗೆ ಎಲ್ಲಾ ನಿಯಮಗಳು ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎನ್ನುವ ನಿಯಮವೇ ತಪ್ಪು. ಏನಂತೀರಾ?

ಇಂದು ನಾನು ಕೆಲಸ ಮಾಡುವ ಐಟಿ ಕಂಪನಿಗಳಲ್ಲಿ, ನನ್ನ ಕಾಗದ ಪತ್ರಗಳಲ್ಲಿ ನನ್ನ ದೇವನಾಗರಿ ಕನ್ನಡದ ಮಿಶ್ರಿತ ಸಹಿ ಮಾತ್ರ ಬಳಸುತ್ತೇನೆ. ಸಂಪೂರ್ಣ ಕನ್ನಡದಲ್ಲಿ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ. ಆದರೆ ಬೇರೆಯವರು ಸುಲಭವಾಗಿ ನಕಲು ಮಾಡಬಾರದು ಎಂಬ ಉದ್ದೇಶದಿಂದ ದೇವನಾಗರಿ ಲಿಪಿ ಸೇರಿಸಿದೆ.

ನನ್ನ ವಿದೇಶಿ ಪ್ರಯಾಣಕ್ಕೆ ಅಥವಾ ಮಲ್ಟಿ ನ್ಯಾಶನಲ್ ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಈ ಕನ್ನಡ ಸಹಿಯಿಂದ ಯಾವುದೇ ತೊಂದರೆಯೂ ಆಗಿಲ್ಲ! ಕೆಲಸದಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ನಿಷ್ಠೆ ಇವು ನಿಮಗೆ ಮುಖ್ಯ ಹೊರತು ಭಾಷೆ ಅಲ್ಲ.

ಕನ್ನಡದಲ್ಲಿ ಸಹಿ ಹಾಕುವಾಗ ಈ ಮುಂದಿನ ವಿಚಾರ ನಿಮ್ಮ ಗಮನದಲ್ಲಿರಲಿ.

  • ಸ್ವಲ್ಪ ನಿಮ್ಮ ಕ್ರಿಯಾಶೀಲತೆಯಿಂದ ಸ್ವಂತ ರೀತಿಯ ಸಹಿಯನ್ನು ಮಾಡಿ. ನೇರವಾಗಿ ಕನ್ನಡದಲ್ಲಿ ನಿಮ್ಮ ಹೆಸರನ್ನು ಬರೆಯಬೇಡಿ. ತಲೆ ಗೊಟ್ಟು ಹಾಗೂ ಒತ್ತಿನಲ್ಲಿ ನಿಮ್ಮತನ ಇರಲಿ. ಆಗ ನಕಲು ಮಾಡುವುದು ಕಷ್ಟ.
  • ದೇವ ನಾಗರಿ ಅಥವಾ ಇಂಗ್ಲಿಷ್ ಲಿಪಿ ಬಳಸಿ ಸುಲಭವಾಗಿ ಕಾಪಿ ಮಾಡದಂತೆ ಟ್ವಿಸ್ಟ್ ಸಹ ಮಾಡಬಹುದು.
  • ನೀವು ಚಿತ್ರಕಾರರಾಗಿದ್ದರೆ ಕನ್ನಡದಲ್ಲಿ ಸಹಿ ಮಾಡಿ. ನೆನಪಿಡಿ ನಿಮ್ಮ ಪ್ರತಿಭೆ ನಿಮ್ಮ ಚಿತ್ರದ ಮೌಲ್ಯವನ್ನು ನಿರ್ಧರಿಸುತ್ತದೆ ಹೊರತು ಸಹಿಯ ಭಾಷೆಯಲ್ಲ.
  • ಕನ್ನಡ ಭಾಷೆಯಲ್ಲಿಯೂ ವಿಶಿಷ್ಟಪೂರ್ಣ ಸುಂದರ ಸಹಿಯನ್ನು ಮಾಡಲು ಸಾಧ್ಯವಿದೆ.ನೀವು ಮನಸ್ಸು ಮಾಡಬೇಕು ಅಷ್ಟೆ.
  • ಸಹಿ ಸಂಕ್ಷಿಪ್ತವಾಗಿದ್ದು ಚಿಕ್ಕದಾಗಿರಲಿ ಎಲ್ಲ ಕಡೆ ತೀರ ದೊಡ್ಡದಾಗಿ ಸಹಿ ಮಾಡಲು ಜಾಗ ಇರುವುದಿಲ್ಲ.

ಈ ಲೇಖನ ಒಬ್ಬ ಕನ್ನಡಿಗನಿಗೆ ಕನ್ನಡದಲ್ಲಿ ಸಹಿ ಮಾಡಿ ಬಳಸಲು ಸ್ಪೂರ್ತಿ ಆದರೆ ಸಾರ್ಥಕ ಅಂದು ಕೊಳ್ಳುತ್ತೇನೆ.

ನಮ್ಮ ಕನ್ನಡದ ಭಾಷೆಯ ಪ್ರತಿಷ್ಠಾಪನೆ ಪ್ರತಿ ಹಂತದಲ್ಲಿ ನಡೆಯಬೇಕು. ಕನ್ನಡದಲ್ಲಿ ಸಹಿ ಹಾಕುವುದು ಒಂದು ಹೆಜ್ಜೆ ಅನ್ನಬಹುದು ಏನಂತೀರಾ? ನಿಮ್ಮ ಅನಿಸಿಕೆ ತಿಳಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.